Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಯುವನಿಧಿ: ಡಿ. 21ರಿಂದ ನೋಂದಣಿ ಪ್ರಕ್ರಿಯೆ ಆರಂಭ

ಬೆಂಗಳೂರು: ರಾಜ್ಯ ಕಾಂಗ್ರೆಸ್‌ ಸರ್ಕಾರದ ಮಹತ್ವಾಕಾಂಕ್ಷಿ ಪಂಚ ಗ್ಯಾರಂಟಿಗಳಲ್ಲಿ ಕೊನೆಯ ಗ್ಯಾರಂಟಿಯಾದ ಯುವನಿಧಿಗೆ ಚಾಲನೆ ನೀಡಲು ಮುಹೂರ್ತ ಫಿಕ್ಸ್‌ ಆಗಿದೆ. ಪದವೀಧರರು ಮತ್ತು ಡಿಪ್ಲೋಮಾ ಹೋಲ್ಡರ್‌ಗಳಿಗೆ ನಿರುದ್ಯೋಗ ಭತ್ಯೆ ನೀಡುವ ಯುವನಿಧಿ ಯೋಜನೆಗೆ ಇದೇ ಡಿಸೆಂಬರ್ 21 ರಿಂದ ನೋಂದಣಿ ಪ್ರಕ್ರಿಯೆ ಆರಂಭ ಆಗಲಿದೆ. ಜನವರಿಯಲ್ಲಿ ಯೋಜನೆಗೆ ಅಧಿಕೃತ ಚಾಲನೆ ಸಿಗಲಿದೆ. ಈ ವಿಚಾರವನ್ನು ವೈದ್ಯಕೀಯ ಶಿಕ್ಷಣ ಮತ್ತು ಕೌಶಲಾಭಿವೃದ್ಧಿ ಖಾತೆ ಸಚಿವ ಶರಣಪ್ರಕಾಶ್‌ ಪಾಟೀಲ್‌ ಮಾಹಿತಿ ನೀಡಿದ್ದಾರೆ.

ಯುವ ನಿಧಿ ಯೋಜನೆ ಡಿಸೆಂಬರ್‌ನಲ್ಲಿ ಜಾರಿಗೆ ಬರಲಿದೆ ಎಂದು ಹಿಂದೆಯೇ ಘೋಷಿಸಲಾಗಿತ್ತು. ಇದೀಗ ನೋಂದಣಿ ಪ್ರಕ್ರಿಯೆಗೆ ಚಾಲನೆ ನೀಡುವ ದಿನಾಂಕವನ್ನು ಪ್ರಕಟಿಸಲಾಗಿದೆ. ಯುವನಿಧಿ ಮೂಲಕ ರಾಜ್ಯದ 5 ಲಕ್ಷ ನವ ನಿರುದ್ಯೋಗಿ ಪದವೀಧರ ಮತ್ತು ಡಿಪ್ಲೊಮಾ ಹೋಲ್ಡರ್‌ ಗಳಿಗೆ ನೇರವಾಗಿ ಹಣ ತಲುಪಲಿದೆ ಎಂದು ಸಚಿವರು ತಿಳಿಸಿದ್ದಾರೆ.

ಯುವ ನಿಧಿ ಯೋಜನೆಯ ಫಲಾನುಭವಿಯಾಗುವುದಕ್ಕೆ ಇರಬೇಕಾದ ಅರ್ಹತೆಗಳು, 2022- 23ನೇ ಸಾಲಿನಲ್ಲಿ ಉತ್ತೀರ್ಣರಾಗಿ 6 ತಿಂಗಳು ಉದ್ಯೋಗ ಸಿಗದೆ ಇರುವವರಿಗೆ ಈ ಯೋಜನೆಯ ಲಾಭ ಸಿಗಲಿದೆ. ವೃತ್ತಿಪರ ಕೋರ್ಸ್‌ ಒಳಗೊಂಡು ಎಲ್ಲ ಪದವೀಧರರಿಗೆ ಪ್ರತಿ ತಿಂಗಳು 3,000 ರೂ. ನೀಡಲಾಗುತ್ತದೆ. ಡಿಪ್ಲೊಮಾ ಪದವೀಧರರಿಗೆ ಮಾಸಿಕ 1,500 ರೂಪಾಯಿ ನಿರುದ್ಯೋಗ ಭತ್ಯೆ ಸಿಗಲಿದೆ.

ಈ ಭತ್ಯೆಯು ಉದ್ಯೋಗ ಸಿಗುವವರೆಗೆ ಅಥವಾ ಗರಿಷ್ಠ 2 ವರ್ಷಗಳ ಅವಧಿಗೆ ಸಿಗಲಿದೆ. ಯಾವುದಾದರೂ ಉದ್ಯೋಗ ಸಿಕ್ಕಿದ ಕೂಡಲೇ ಈ ಸವಲತ್ತು ಸ್ಥಗಿತಗೊಳ್ಳಲಿದೆ. ಸೇವಾ ಸಿಂಧು ಪೋರ್ಟಲ್‌ ಮೂಲಕವೇ ಅರ್ಜಿ ಸಲ್ಲಿಸಬೇಕು. ಪದವಿ, ಡಿಪ್ಲೊಮಾ ಮುಗಿಸಿದ ಫ್ರೆಷರ್ಸ್‌ಗೆ 6 ತಿಂಗಳಾದರೂ ಉದ್ಯೋಗ ಸಿಗದೆ ಇದ್ದರೆ ನಿರುದ್ಯೋಗ ಭತ್ಯೆ ನೀಡಲಾಗುತ್ತದೆ. ಉದ್ಯೋಗ ದೊರೆತ ನಂತರ ಘೋಷಣೆ ಮಾಡಿಕೊಂಡು ಭತ್ಯೆ ಸ್ವೀಕರಿಸುವುದನ್ನು ನಿಲ್ಲಿಸಬೇಕು. ಇಲ್ಲದೇ ಇದ್ದರೆ ದಂಡ ವಿಧಿಸಲಾಗುತ್ತದೆ.

ಕರ್ನಾಟಕ ಯುವನಿಧಿ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು, ಮತದಾರರ ಗುರುತಿನ ಚೀಟಿ, ಪಡಿತರ ಚೀಟಿ ಮತ್ತು ಆಧಾರ್‌ ಕಾರ್ಡ್‌ ಇರಬೇಕು. ಬ್ಯಾಂಕ್‌ ಖಾತೆ ಮಾಹಿತಿ‌ ಸ್ಪಷ್ಟವಾಗಿರಬೇಕು. ಪದವಿ ಅಂಕಪಟ್ಟಿ ಹಾಗೂ ವಿಶ್ವವಿದ್ಯಾಲಯ ಪದವಿ ಪ್ರಮಾಣ ಪತ್ರ ಕಡ್ಡಾಯ. ಡಿಪ್ಲೊಮಾ ಅಂಕಪಟ್ಟಿ ಹಾಗೂ ಪ್ರಮಾಣ ಪತ್ರ ಇರಬೇಕು.