Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಶ್ರೀಕೃಷ್ಣ ಜನ್ಮಭೂಮಿ ವಿವಾದ: ಶಾಹಿ ಈದ್ಗಾ ಮಸೀದಿ ಸಮೀಕ್ಷೆಗೆ ಹೈಕೋರ್ಟ್‌ ಅನುಮತಿ

ಪ್ರಯಾಗರಾಜ್: ಉತ್ತರ ಪ್ರದೇಶದ ಮಥುರಾದಲ್ಲಿನ ಶಹಿ ಈದ್ಗಾ ಮಸೀದಿಯಲ್ಲಿ ಸಮೀಕ್ಷೆ ನಡೆಸಲು ಅಲಹಾಬಾದ್ ಹೈಕೋರ್ಟ್ ಗುರುವಾರ ಗ್ನೀನ್ ಸಿಗ್ನಲ್ ನೀಡಿದೆ. ಈ ಮೂಲಕ ಬಹು ವರ್ಷದ ಹಿಂದೂಗಳ ಹೋರಾಟಕ್ಕೆ ಜಯ ಸಿಕ್ಕಿದೆ. ನ್ಯಾ.ಮಯಾಂಕ್‌ ಕುಮಾರ್‌ ಜೈನ್‌ ಮಹತ್ವದ ಆದೇಶ ನೀಡಿ, ಸಮೀಕ್ಷೆ ನಡೆಸಲು ಕಮಿಷನರ್ ತಂಡ ರಚನೆ ಮಾಡಲು ಸೂಚಿಸಿದ್ದಾರೆ.

ಭಗವಾನ್ ಕೃಷ್ಣ ಜನಿಸಿದ ಸ್ಥಳದಲ್ಲಿ ಮಸೀದಿಯನ್ನು ನಿರ್ಮಿಸಲಾಗಿದೆ ಎನ್ನುವುದು ಹಿಂದೂ ಅರ್ಜಿದಾರರ ವಾದವಾಗಿದೆ. ಮಥುರಾದಲ್ಲಿನ ಶಾಹಿ ಈದ್ಗಾ ಮಸೀದಿಯನ್ನು ಔರಂಗಜೇಬನ ಆದೇಶದ ಮೇರೆಗೆ ಕೃಷ್ಣ ಜನ್ಮಸ್ಥಳದ ಪಕ್ಕದಲ್ಲಿ ನಿರ್ಮಿಸಲಾಗಿತ್ತು. ಸಮೀಕ್ಷೆಯ ವಿಧಾನಗಳನ್ನು ಡಿಸೆಂಬರ್ 18ರಂದು ನಡೆಯುವ ಮುಂದಿನ ವಿಚಾರಣೆಯಲ್ಲಿ ಚರ್ಚಿಸಲಾಗುವುದು ಎಂದು ನ್ಯಾಯಾಲಯ ಹೇಳಿದೆ.

ಭಗವಾನ್ ಶ್ರೀಕೃಷ್ಣ ವಿರಾಜಮಾನ ಸಮಿತಿ ಹಾಗೂ ಇತರ 7 ಮಂದಿ ಮಸೀದಿಯ ಸರ್ವೇ ನಡೆಸುವಂತೆ ಅರ್ಜಿ ಸಲ್ಲಿಸಿದ್ದರು. ಹಿಂದೂ ದೇವಸ್ಥಾನವನ್ನು ಬೀಳಿಸಿ ಶಾಹಿ ಈದ್ಗಾ ಮಸೀದಿ ಕಟ್ಟಲಾಗಿದೆ. ಶಾಹಿ ಈದ್ಗಾ ಮಸೀದಿಯಲ್ಲಿ ಹಿಂದೂ ದೇವಸ್ಥಾನದ ಕುರುಹುಗಳಿವೆ. ಹೀಗಾಗಿ ಈದ್ಗಾ ಮಸೀದಿಯನ್ನು ಸಮೀಕ್ಷೆಗೆ ಒಳಪಡಿಸಬೇಕು ಎಂದು ಅರ್ಜಿ ಸಲ್ಲಿಸಲಾಗಿತ್ತು.

ಇತ್ತೀಚೆಗೆ ಸುಪ್ರೀಂ ಕೋರ್ಟ್ ಈ ಕುರಿತ ಅರ್ಜಿಯನ್ನು ವಜಾಗೊಳಿಸಿತ್ತು. ದೇವಸ್ಥಾನದ ಮೇಲೆ ಮಸೀದಿ ಕಟ್ಟಲಾಗಿದೆಯೇ ಎನ್ನುವುದನ್ನು ಪತ್ತೆ ಹಚ್ಚಲು ಸರ್ವೆಗೆ ಅವಕಾಶ ನೀಡುವಂತೆ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಕೆಯಾಗಿತ್ತು. ಸದ್ಯ ಹೈಕೋರ್ಟ್‌ನಲ್ಲಿ ಕೃಷ್ಣ ಜನ್ಮಭೂಮಿ ಟ್ರಸ್ಟ್‌ಗೆ ಜಯ ಸಿಕ್ಕಿದೆ.