Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಉದ್ಯಮಿ ಮನೆ ಮೇಲೆ ಐಟಿ ದಾಳಿ: ಇಬ್ಬರು ಬಾಲ ಕಾರ್ಮಿಕರು ಪತ್ತೆ

ಬೆಂಗಳೂರು: ತೆರಿಗೆ ವಂಚನೆಗೆ ಸಂಬಂಧಿಸಿ ಆಭೂಷಣ್‌ ಜ್ಯುವೆಲ್ಲರಿ ಶೋರೂಂ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದು, ಕಳೆದ ನಾಲ್ಕು ದಿನಗಳಿಂದ ತಪಾಸಣೆ ನಡೆಯುತ್ತಿದೆ. ಈ ನಡುವೆ ಇಬ್ಬರು ಬಾಲ ಕಾರ್ಮಿಕರನ್ನು ಇಟ್ಟುಕೊಂಡಿರುವುದು ಪತ್ತೆಯಾಗಿದ್ದು, ಮತ್ತೊಂದು ಎಫ್‌ಐಆರ್‌ ದಾಖಲು ಮಾಡಲಾಗಿದೆ.

ಆಭೂಷಣ್‌ ಜ್ಯುವೆಲ್ಲರಿ ಮೇಲೆ ದಾಳಿ ನಡೆಸಿದ ಐಟಿ ಅಧಿಕಾರಿಗಳಿಂದ ಇಬ್ಬರು ಮಕ್ಕಳ ರಕ್ಷಣೆ ಮಾಡಲಾಗಿದೆ. ಕಳೆದ ಮೂರು ದಿನಗಳಿಂದ ಮಳಿಗೆಗಳ ಹಾಗೂ ಲೆಕ್ಕಪತ್ರಗಳ ಪರಿಶೀಲನೆ ನಡೆದಿದೆ. ಜ್ಯುವೆಲರ್ಸ್‌ನ ಮಾಲಿಕರ ಜಯನಗರದ ಮನೆಯಲ್ಲೂ ಪರಿಶೀಲನೆ ಮಾಡಲಾಗಿದೆ. ಈ ವೇಳೆ ಇಬ್ಬರು ಅಪ್ರಾಪ್ತ ಬಾಲಕಿಯರು ಪತ್ತೆಯಾಗಿದ್ದರು. 10 ಹಾಗೂ 8 ವರ್ಷದ ಇಬ್ಬರು ಬಾಲ ಕಾರ್ಮಿಕರು ಪತ್ತೆಯಾಗಿದ್ದು, ಈ ಬಗ್ಗೆ ಪೊಲೀಸರಿಗೆ ಐಟಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮಾಲಿಕರಾದ ಅಶೋಕ್ ಕುಮಾರ್, ಶ್ರೇಯಸ್ ಚೌಡರೆ ಮತ್ತು ಗೌರವ್ ಚೌಡರೆ ಮೇಲೆ ಎಫ್‌ಐಆರ್‌ ದಾಖಲಿಸಲಾಗಿದೆ. ಮನೆಯ ಮಾಲಕಿ ಪಿಂಕಿ ಜೈನ್ ಆರೈಕೆಗೆ ಇವರನ್ನು ಕರೆತರಲಾಗಿದೆ ಎಂದು ಹೇಳಲಾಗಿದೆ. ಇವರು ಬಿಹಾರದ ಗಾಯಾ ಜಿಲ್ಲೆಯ ಮಕ್ಕಳು. ತಾಕತೂರಿನ ಕಾಜೋಲ್ ಮತ್ತು ಸುಹಾನಿಯ ಎಂದು ಗುರುತಿಸಲಾಗಿದ್ದು, ಈವರನ್ನು ರಕ್ಷಿಸಿ ಹಾಸ್ಟೆಲ್‌ಗೆ ಶಿಫ್ಟ್ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಜೆಜೆ ಆ್ಯಕ್ಟ್ ಸೆಕ್ಷನ್‌ 79, ಚೈಲ್ಡ್ ಲೇಬರ್ ಆ್ಯಕ್ಟ್ ಸೆಕ್ಷನ್‌ 3 ಮತ್ತು 14 ರ ಅಡಿ ಕೇಸ್ ದಾಖಲಿಸಲಾಗಿದೆ.

ಆಭೂಷಣ್ ಜ್ಯುವೆಲ್ಲರಿ ಮೇಲೆ ಐಟಿ ದಾಳಿಯಲ್ಲಿ, ನಾಲ್ಕು ದಿನವಾದರೂ ಐಟಿ ಅಧಿಕಾರಿಗಳ ಪರಿಶೀಲನೆ ಮುಗಿದಿಲ್ಲ. ಇಂದು ಸಹ ಪರಿಶೀಲನೆ ನಡೆಸಲಾಗಿದೆ. ಸಾವಿರಾರು ಕಿಲೋ ಚಿನ್ನಾಭರಣ ಮಾರಾಟದಲ್ಲಿ ಅಕ್ರಮ ಎಸಗಲಾಗಿದ್ದು, ಹಲವು ವರ್ಷಗಳ ಅಕ್ರಮವನ್ನು ಬಯಲು ಮಾಡಲಾಗುತ್ತಿದೆ. ಅಗೆದಷ್ಟೂ ದಾಖಲೆಗಳು ಸಿಗುತ್ತಿದ್ದು, ಸೂಕ್ತ ದಾಖಲೆಗಳನ್ನು ಐಟಿ ಟೀಂ ರಿಕವರಿ ಮಾಡುತ್ತಿದೆ.

ಬಿಲ್ಲಿಂಗ್ ಮಾಡಲು ಪೆನ್ ಡ್ರೈವ್ ಬೇಸ್ ಟೆಕ್ನಾಲಜಿ ಬಳಕೆ ಮಾಡಲಾಗಿದ್ದು, ಒಂದೇ ಸಿಸ್ಟಮ್‌ನಲ್ಲಿ ಎರಡು ರೀತಿಯ ಅಕೌಂಟ್ ಮೆಂಟೇನ್ ಮಾಡಿರುವುದು ಪತ್ತೆಯಾಗಿದೆ. ಇವರಿಗೆ ಬರುತ್ತಿದ್ದ ಚಿನ್ನದ ದಾಖಲೆಗಳನ್ನು ಐಟಿ ಹಿಂಬಾಲಿಸಿದ್ದು, ಹಲವಾರು ತಿಂಗಳ ಅಕ್ರಮ ಪತ್ತೆ ಮಾಡಿ ದಾಳಿ ನಡೆಸಿದೆ.