Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ವಿವಾದಿತ ದತ್ತಪೀಠದಲ್ಲಿ ಡಿ.26 ರವರೆಗೆ ದತ್ತ ಜಯಂತಿ, ಪ್ರವಾಸ ಮುಂದೂಡಲು ಪ್ರವಾಸಿಗರಿಗೆ ಜಿಲ್ಲಾಡಳಿತ ಸೂಚನೆ..!

ಚಿಕ್ಕಮಗಳೂರು: ರಾಜ್ಯದ ವಿವಾದಿತ ಚಿಕ್ಕಮಗಳೂರಿನ ಬಾಬಾ ಬುಡನ್‌ ಗಿರಿಯ ಇನಾಂ ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾದಲ್ಲಿ ಡಿಸೆಂಬರ್‌ 17ರಿಂದ ದತ್ತ ಜಯಂತಿ ಆರಂಭಗೊಂಡಿದೆ. ಡಿಸೆಂಬರ್‌ 26ರವರೆಗೆ ದತ್ತ ಜಯಂತಿ ನಡೆಯಲಿದ್ದು ಮುಂಜಾಗ್ರತಾ ಕ್ರಮವಾಗಿ ಅರ್ಚಕರು, ಮುಜಾವರ್ ಸೇರಿದಂತೆ ಐವರಿಗೆ ಪೊಲೀಸ್‌ ಇಲಾಖೆ ಈಗಿನಿಂದಲೇ ಗನ್ ಮ್ಯಾನ್ ನೇಮಕ ಮಾಡಿದೆ.

ದತ್ತಪೀಠದಲ್ಲಿ ಈ ಬಾರಿ ಹೋಮ ನಡೆಸಲು ಅವಕಾಶ ನೀಡಲಾಗಿದೆ. ಇದಕ್ಕೆ ಪ್ರತಿಯಾಗಿ ಮುಸ್ಲಿಮರು ತಮಗೆ ನಮಾಜ್‌ ಮಾಡಲು ಅವಕಾಶ ಕೊಡಿ ಎಂದು ಕೂಡಾ ಆಗ್ರಹಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸ್ವಲ್ಪ‌ ತಿಕ್ಕಾಟ ಈ ಬಾರಿ ನಡೆಯುವ ಸಾಧ್ಯತೆ ಕಂಡುಬಂದಿದೆ. ಈಗಾಗಲೇ ಡಿಸೆಂಬರ್‌ 17ರಂದು ಚಿಕ್ಕಮಗಳೂರಿನ ಮಾಜಿ ಶಾಸಕ, ಬಿಜೆಪಿ ನಾಯಕ ಸಿ.ಟಿ. ರವಿ ಅವರು ಬೆಂಬಲಿಗರ ಜತೆ ದತ್ತ ಮಾಲೆ ಧಾರಣೆ ಮಾಡಿದ್ದಾರೆ. ಜಿಲ್ಲೆಯಾದ್ಯಂತ 5000ಕ್ಕೂ ಹೆಚ್ಚು ಮಂದಿ ಮಾಲಾ ಧಾರಣೆ ಮಾಡುವ ಸಾಧ್ಯತೆ ಇದೆ. ಅತ್ತ ಈಗ ಬಿಜೆಪಿ ಜತೆ ಕೈಜೋಡಿಸಿರುವ ಜೆಡಿಎಸ್‌ನ ನಾಯಕ ಮಾಜಿ ಮುಖ್ಯಮಂ‌ತ್ರಿ ಎಚ್‌.ಡಿ ಕುಮಾರಸ್ವಾಮಿ ಅವರು ತಾನು ದತ್ತ ಮಾಲೆ ಹಾಕಲು ಸಿದ್ಧ ಎಂದು ಘೋಷಿಸಿದ್ದಾರೆ. ಈ ಎಲ್ಲ ಕಾರಣಗಳಿಂದ ಚಿಕ್ಕಮಗಳೂರು ಜಿಲ್ಲಾಡಳಿತ ಬಿಗಿಬಂದೋಬಸ್ತ್‌ ಏರ್ಪಡಿಸಿದೆ. ಚಿಕ್ಕಮಗಳೂರು ಪ್ರವಾಸ ಮುಂದೂಡಿ ಎಂದು ಪ್ರವಾಸಿಗರಿಗೆ ಜಿಲ್ಲಾಡಳಿತ ಸೂಚನೆ ನೀಡಿದೆ. ಚಿಕ್ಕಮಗಳೂರು ಎಸ್ಪಿ ವಿಕ್ರಂ ಅಮಟೆ ಅವರು ಈ ಆದೇಶ ನೀಡಿದ್ದು, ಮುಂದಿನ ಹದಿನೈದು ದಿನಗಳ ಕಾಲ ದಿನದ 24 ಗಂಟೆಗಳ ಕಾಲ‌ವೂ ಐವರಿಗೆ ಭದ್ರತೆ ನೀಡುವಂತೆ ಸೂಚನೆ ನೀಡಲಾಗಿದೆ.