Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಮಹಿಳೆ ಸಂಸ್ಕೃತಿಯ ಬ್ರಾಂಡ್ ಅಂಬಾಸಿಡರ್ -ಸಚಿವೆ ಲಕ್ಷ್ಮೀ ಹೆಬ್ಬಾಳಕರ್

ವಿಜಯಪುರ: ಮಹಿಳೆ ಹೊರತಾಗಿ ಸಂಸ್ಕೃತಿ ಇಲ್ಲ, ಸಂಸ್ಕೃತಿ ಹೊರತಾಗಿ ಮಹಿಳೆ ಇಲ್ಲ. ಸಂಸ್ಕೃತಿ ಉಳಿದಿದ್ದು ಮಹಿಳೆಯಿಂದ, ಮಹಿಳೆ ಸಂಸ್ಕೃತಿಯ ಬ್ರಾಂಡ್ ಅಂಬಾಸಿಡರ್ ಎಂದು ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.

ಬುಧವಾರ ಸಂಜೆ ವಿಜಯಪುರದ ಜ್ಞಾನಯೋಗಾಶ್ರಮದಲ್ಲಿ ಸಿದ್ದೇಶ್ವರ ಸ್ವಾಮೀಜಿ ಗುರುನಮನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಹಿಳೆ ಮತ್ತು ಸಂಸ್ಕೃತಿ ಗೋಷ್ಠಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಭಾರತ ದೇಶಕ್ಕೆ 5 ಸಾವಿರ ವರ್ಷಗಳ ಇತಿಹಾಸವಿದೆ. ಭಾರತ ದೇಶದ ವೈಭವಪೂರಿತ ಇತಿಹಾಸವನ್ನು ನಾವು ಕೇಳಿ ತಿಳಿದುಕೊಂಡಿದ್ದೇವೆ. ಆದರೆ ಮಹಿಳೆಯನ್ನು ಕೇವಲ ಹೆರೋಕೆ, ಲಾಲಿ ಹಾಡೋಕೆ, ಅಡುಗೆ ಮಾಡೋಕೆ ಸೀಮಿತ ಮಾಡಲಾಗಿದೆ. ಗಂಡ ಸತ್ತರೆ ಬದುಕಲು ಸಾಧ್ಯವೇ ಇಲ್ಲ ಎಂದು ಚಿತೆಗೆ ಹಾರಿ ಪ್ರಾಣ ಬಿಡುವ ಅನಿಷ್ಠ ಪದ್ಧತಿಯನ್ನು ಭಾರತ ಕಂಡಿದೆ. ಇಂದು ಹೆಣ್ಣು ಬದಲಾಗಿದ್ದಾಳೆ. ಪೈಲಟ್ ಆಗಿಯೂ ಸಾಧನೆ ಮಾಡಿದ್ದಾಳೆ, ಕೂಲಿ ಮಾಡಿಯೂ ಸಂಸಾರ ನಡೆಸುತ್ತಾಳೆ, ಗಂಡನ ಹೆಗಲಿಗೆ ಹೆಗಲು ಕೊಟ್ಟು ಸಂಸಾರದ ಚಕ್ಕಡಿಯನ್ನು ಮುಂದೆ ಒಯ್ಯುತ್ತಾಳೆ. ಹಾಗಾಗಿ ಮಹಿಳೆ ಬಗೆಗಿನ ನಮ್ಮ ಭಾವನೆಗಳು ಬದಲಾವಣೆಯಾಗಬೇಕು ಎಂದು ಹೆಬ್ಬಾಳಕರ್ ಹೇಳಿದರು.

ಬೆಳಗ್ಗೆ ಎದ್ದು ಕಸ ಗುಡಿಸಿ ರಂಗವಲ್ಲಿ ಹಾಕುವಲ್ಲಿಂದ ಸಂಸ್ಕೃತಿ ಹರಡುವ ತನ್ನ ಕಾಯಕವನ್ನು ಮಹಿಳೆ ಆರಂಭಿಸುತ್ತಾಳೆ. ಪ್ರತಿ ನಿತ್ಯ ತಡವಾಗಿ ಮಲಗುವವಳೂ ಮಹಿಳೆ, ಬೆಳಗ್ಗೆ ಬೇಗ ಏಳುವವಳೂ ಮಹಿಳೆ, ಹಬ್ಬಹರಿದಿನ ಬಂದರೆ ಹೋಳಿಗೆ ಮಾಡುವವಳೂ ಹೆಣ್ಣು ಎಂದು ಅವರು ಹೇಳಿದರು.

ಶಾರೀರಿಕವಾಗಿ ಮಹಿಳೆ ಸ್ವಲ್ಪ ದುರ್ಬಲಳಾಗಿರಬಹುದು. ಆದರೆ ಮಾನಸಿಕವಾಗಿ ನಾವು ಗಟ್ಟಿಯಾಗಿದ್ದೇವೆ. ಪುರುಷರು ಸಣ್ಣ ಕಷ್ಟ ಬಂದರೆ ನಲುಗಿ ಆತ್ಮಹತ್ಯೆ ಯೋಚನೆ ಮಾಡುತ್ತಾರೆ. ಆದರೆ ಮಹಿಳೆ ಎಂತಹ ಸಂದರ್ಭ ಬಂದರೂ ಕಂಗೆಡದೆ ಕೂಲಿ ಮಾಡಿಯಾದರೂ ಸಂಸಾರ ನಡೆಸುತ್ತಾಳೆ, ಆತ್ಮಹತ್ಯೆಯ ಯೋಚನೆ ಮಾಡುವುದಿಲ್ಲ. ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಮಹಿಳೆ ಮುಂದೆ ಬರಬೇಕು ಎಂದು ಹೆಬ್ಬಾಳಕರ್ ಹೇಳಿದರು.