Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಶಬರಿಮಲೆ ಮಕರವಿಳಕ್ಕು ಉತ್ಸವ – ಮೊದಲ ದಿನವೇ ಭಕ್ತರ ಸಾಗರ

ಶಬರಿಮಲೆ : ಶಬರಿಮಲೆ ಮಕರವಿಳಕ್ಕು ಉತ್ಸವಕ್ಕಾಗಿ ಶಬರಿಮಲೆ ಅಯ್ಯಪ್ಪ ದೇಗುಲಕ್ಕೆ ಮತ್ತೆ ಇದೀಗ ಭಕ್ತರ ಸಾಗರವೇ ಹರಿದು ಬಂದಿದೆ. ಮಂಡಲ ಪೂಜೆಯ ಸಮಯ ಶಬರಿಮಲೆ ಭಕ್ತರಿಂದ ತುಂಬಿದ್ದು, ಸರಿಯಾದ ವ್ಯವಸ್ಥೆ ಮಾಡಲಾಗದೇ ಕೇರಳ ಸರಕಾರದ ವಿರುದ್ದ ಆಕ್ರೋಶ ಕೇಳಿ ಬಂದಿತ್ತು.

ಇದೀಗ ಮಕರವಿಳಕ್ಕು ಉತ್ಸವಕ್ಕೆ ಶಬರಿಮಲೆ ದೇವಸ್ಥಾನ ಮತ್ತೆ ತೆರೆದಿದೆ. ಇಂದು 3 ಗಂಟೆಗೆ ತೆರೆಯಲಾಯಿತು. ಅಯ್ಯಪ್ಪಸ್ವಾಮಿಗೆ 18,018 ತೆಂಗಿನಕಾಯಿಗಳಿಂದ ತುಪ್ಪದ ಅಭಿಷೇಕ, ಸೇರಿದಂತೆ ಪೂಜೆಯನ್ನು ನೆರವೇರಿಸಲಾಯಿತು ಎಂದು ಅರ್ಚಕರು ತಿಳಿಸಿದ್ದಾರೆ.
ಮಕರವಿಳಕ್ಕು ಉತ್ಸವದ ಅಂಗವಾಗಿ ಮುಖ್ಯ ಅರ್ಚಕ ಪಿ.ಎನ್‌.ಮಹೇಶ್‌ ನಂಬೂದಿರಿ ಅವರು ತಂತ್ರಿ ಕಂಡರಾರು ಮಹೇಶ್‌ ಮೋಹನರಾರು ಅವರ ಉಪಸ್ಥಿತಿಯಲ್ಲಿ ಅಯ್ಯಪ್ಪ ಸ್ವಾಮಿ ದೇವಾಲಯದ ಗರ್ಭಗುಡಿಯ ಬಾಗಿಲನ್ನು ಶನಿವಾರ ತೆರೆಯಲಾಯಿತು. ಮಂಡಲ ಪೂಜೆ ಮುಕ್ತಾಯವಾದ ನಂತರ ಡಿಸೆಂಬರ್‌ 27ರಂದು ದೇಗುಲದ ಬಾಗಿಲನ್ನು ಮುಚ್ಚಲಾಗಿತ್ತು.

ಜ.15ರಂದು ನಡೆಯುವ ಮಕರವಿಳಕ್ಕು ಅಂಗವಾಗಿ ‘ಪ್ರಸಾದ ಶುದ್ಧ ಕ್ರಿಯೆ’ ಮತ್ತು ‘ಬಿಂಬ ಶುದ್ಧ ಕ್ರಿಯೆ’ ಮೊದಲಾದ ಧಾರ್ಮಿಕ ವಿಧಿಗಳು ಜನವರಿ 13 ಮತ್ತು 14ರಂದು ನಡೆಯಲಿವೆ ಎಂದು ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ) ಹೇಳಿಕೆಯಲ್ಲಿ ತಿಳಿಸಿದೆ.
ಮಕರವಿಳಕ್ಕು ದಿನದಂದು ‘ತಿರುವಾಭರಣ’ ಸ್ವೀಕಾರ, ದೀಪಾರಾಧನೆಗೆ ಸಾವಿರಾರು ಮಂದಿ ಭಕ್ತರು ಸಾಕ್ಷಿಯಾಗಲಿದ್ದಾರೆ ಎಂದಿದೆ. ಮಕರವಿಳಕ್ಕು ದರ್ಶನದ ಬಳಿಕವೂ ಜನವರಿ 20ರ ವರೆಗೆ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ನೀಡಲಾಗುವುದು ಎಂದೂ ಹೇಳಿದೆ.