Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಪಾಕಿಸ್ತಾನದ ‘ಭಯೋತ್ಪಾದನೆ’ ಆಟಕ್ಕೆ ಭಾರತ ಅವಕಾಶ ನೀಡುವುದಿಲ್ಲ’- ಎಸ್.ಜೈಶಂಕರ್

ದೆಹಲಿ: ಪಾಕಿಸ್ತಾನವು ನಮ್ಮೊಂದಿಗೆ ಹೇಳಿಕೊಳ್ಳುವಷ್ಟು ಉತ್ತಮ ಸಂಬಂಧ ಇಟ್ಟುಕೊಂಡಿಲ್ಲ. ಪಾಕಿಸ್ತಾನ ಭಯೋತ್ಪಾದನೆಗೆ ಬೆಂಬಲ ನೀಡುವುದರಿಂದ ಭಾರತವೂ ಪಾಕಿಸ್ತಾನದೊಂದಿಗೆ ರಾಜತಾಂತ್ರಿಕ ವ್ಯವಹಾರ ಬಿಟ್ಟು ಸ್ನೇಹ ಬೆಳೆಸಲು ಇಷ್ಟಪಡುವುದಿಲ್ಲ ಎಂದು ಭಾರತ ವಿದೇಶಾಂಗ ಸಚಿವ ಜೈ ಶಂಕರ್ ತಿಳಿಸಿದ್ದಾರೆ.

ಸಂದರ್ಶನವೊಂದರಲ್ಲಿ ಈ ಬಗ್ಗೆ ಮಾತನಾಡಿದ ಅವರು, ಗಡಿಯಾಚೆಗಿನ ಭಯೋತ್ಪಾದನೆ ಬಗ್ಗೆ ಮಾತುಕತೆ ನಡೆಸಲು ಪಾಕಿಸ್ತಾನ ಸಿದ್ಧವಿಲ್ಲ. ಅದು ಅಪ್ರಸ್ತುತ. ನಮ್ಮ ದೇಶ ಎಂದಿಗೂ ಭಯೋತ್ಪಾದನೆಗೆ ಬೆಂಬಲ ನೀಡುವ ದೇಶದೊಂದಿಗೆ ವ್ಯವಹರಿಸುವುದಿಲ್ಲ. ಭಯೋತ್ಪಾದನೆ ಹಾಗೂ ಹಗೆತನದಿಂದ ಮುಕ್ತವಾದ ಅನುಕೂಲಕರ ವಾತಾವರಣ ನಿರ್ಮಾಣ ಮಾಡಬೇಕಿದೆ. ಗಡಿಯಾಚೆಗಿನ ಭಯೋತ್ಪಾದನೆಯನ್ನು ನಾವು ಸಹಿಸುವುದಿಲ್ಲ ಎಂದು ಪಾಕಿಸ್ತಾನದ ವಿರುದ್ಧ ವಾಗ್ದಾಳಿ ನಡೆಸಿದರು.

ಹಲವು ದಶಕಗಳಿಂದ ಭಾರತದೊಳಗೆ ಭಯೋತ್ಪಾದನೆ ತರಬೇಕೆಂಬ ಸಂಚನ್ನು ಪಾಕಿಸ್ತಾನ ಹಾಕಿಕೊಂಡಿದೆ. ಪಾಕಿಸ್ತಾನದ ಮೂಲ ಅಜೆಂಡಾ ಕೂಡ ಇದೇ ಆಗಿದೆ. ಇದಕ್ಕೆ ಭಾರತ ಅವಕಾಶ ನೀಡುವುದಿಲ್ಲ. ಜೊತೆಗೆ ಈ ರೀತಿಯ ಮನಸ್ಥಿತಿ ಹೊಂದಿದ ಯಾವುದೇ ದೇಶದೊಂದಿಗೂ ನಾವು ವ್ಯವಹರಿಸುವುದಿಲ್ಲ. ಅವರು ನಿರ್ಧರಿಸಿದ ಕ್ರಮ ಹಾಗೂ ಕಾನೂನಿಗೆ ನಾವು ಒಪ್ಪಿಗೆ ಸೂಚಿಸುವುದಿಲ್ಲ ಎಂದು ಅವರು ಹೇಳಿದರು.

ಪಾಕಿಸ್ತಾನದೊಂದಿಗೆ ನಾವು ಉತ್ತಮ ಸಂಬಂಧ ಹಾಗೂ ವ್ಯವಹರಿಸಬೇಕಾದರೆ, ಅದು ಮೊದಲು ಭಯೋತ್ಪಾದನೆ ಮತ್ತು ಹಗೆತನದಿಂದ ಮುಕ್ತವಾಗಿರಬೇಕು. ಪಾಕಿಸ್ತಾನದ ಭವಿಷ್ಯವು ಅದರದೇ ಆದ ಕ್ರಮಗಳು ಹಾಗೂ ಆಯ್ಕೆಯಿಂದ ಹೆಚ್ಚಾಗಿ ನಿರ್ಧರಿಸಲ್ಪಡುತ್ತದೆ. ಆದ್ದರಿಂದಲೇ ಇತರೆ ದೇಶಗಳೊಂದಿಗೆ ಆರ್ಥಿಕವಾಗಿ ವ್ಯವಹರಿಸಲು ಆಗುತ್ತಿಲ್ಲ ಎಂದು ಸಚಿವ ಜೈ ಶಂಕರ್ ಪಾಕಿಸ್ತಾನಕ್ಕೆ ಪರೋಕ್ಷವಾಗಿ ತಿರುಗೇಟು ನೀಡಿದ್ದಾರೆ.