Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಅಕ್ರಮವಾಗಿ ನಡೆಸುತ್ತಿದ್ದ ಆಶ್ರಯ ಮನೆಯಿಂದ 26 ಬಾಲಕಿಯರು ನಾಪತ್ತೆ..!

ಅಕ್ರಮವಾಗಿ ನಡೆಸುತ್ತಿದ್ದ ಆಶ್ರಯ ಮನೆಯಿಂದ 26 ಬಾಲಕಿಯರು ನಾಪತ್ತೆಯಾಗಿರುವ ಅಘಾತಕಾರಿ ಘಟನೆ ಮಧ್ಯಪ್ರದೇಶದ ಭೋಪಾಲ್‌ನಲ್ಲಿ ನಡೆದಿದೆ. ಗುಜರಾತ್, ಜಾರ್ಖಂಡ್, ರಾಜಸ್ಥಾನ, ಮಧ್ಯಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳ 26 ಬಾಲಕಿಯರು ಭೋಪಾಲ್‌ನಲ್ಲಿ ಅಕ್ರಮವಾಗಿ ನಡೆಸುತ್ತಿದ್ದ ಆಶ್ರಯ ಮನೆಯಲ್ಲಿದ್ದರು.

ಅನುಮತಿಯಿಲ್ಲದೆ ಬಾಲಕಿಯರ ಮನೆ ನಡೆಸುತ್ತಿರುವ ಖಾಸಗಿ ಎನ್‌ಜಿಒ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಪ್ರಿಯಾಂಕ್ ಕನುಂಗೋ ಅವರು ಭೋಪಾಲ್‌ನ ಹೊರವಲಯದಲ್ಲಿರುವ ಪರ್ವಾಲಿಯಾ ಪ್ರದೇಶದ ಆಂಚಲ್ ಬಾಲಕಿಯರ ಹಾಸ್ಟೆಲ್‌ಗೆ ದಿಢೀರ್ ಭೇಟಿ ನೀಡಿದಾಗ ಈ ವಿಷಯ ಬೆಳಕಿಗೆ ಬಂದಿದೆ. ಅವರು ರಿಜಿಸ್ಟರ್ ಪರಿಶೀಲಿಸಿದಾಗ ಅದರಲ್ಲಿ 68 ಹುಡುಗಿಯರ ನಮೂದುಗಳು ಇದ್ದವು. ಆದರೆ ಅವರಲ್ಲಿ 26 ಮಂದಿ ನಾಪತ್ತೆಯಾಗಿದ್ದಾರೆ.

ನಾಪತ್ತೆಯಾಗಿರುವ ಬಾಲಕಿಯರ ಕುರಿತು ಮಕ್ಕಳ ನಿಲಯದ ನಿರ್ದೇಶಕ ಅನಿಲ್ ಮ್ಯಾಥ್ಯೂ ಅವರನ್ನು ಪ್ರಶ್ನಿಸಿದಾಗ ಅನುಮಾನ ವ್ಯಕ್ತವಾಗಿದೆ. ಬಳಿಕ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಪರ್ವಲಿಯಾ ಪೊಲೀಸರು ಈ ಸಂಬಂಧ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ಹಾಸ್ಟೆಲ್‌ನಲ್ಲಿ ಸಿಸಿಟಿವಿ ಕ್ಯಾಮೆರಾಗಳಿಲ್ಲ. ಬಾಲಕಿಯರ ವಸತಿ ನಿಲಯದಲ್ಲಿ ಇಬ್ಬರು ಮಹಿಳೆಯರ ಹೊರತಾಗಿ ರಾತ್ರಿ ವೇಳೆ ಇಬ್ಬರು ಪುರುಷ ಕಾವಲುಗಾರರಿದ್ದಾರೆ.

ನಿಯಮದ ಪ್ರಕಾರ ಮಹಿಳಾ ಸಿಬ್ಬಂದಿ ಮಾತ್ರ ಕಡ್ಡಾಯವಾಗಿ ಉಳಿದುಕೊಳ್ಳಬೇಕು. ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ತಮ್ಮ ಪೋಸ್ಟ್‌ನಲ್ಲಿ, ಭೋಪಾಲ್‌ನ ಪರ್ವಾಲಿಯಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅನುಮತಿಯಿಲ್ಲದೆ ನಡೆಸುತ್ತಿರುವ ಮಕ್ಕಳ ಆಶ್ರಯ ಮನೆಯಿಂದ 26 ಬಾಲಕಿಯರು ನಾಪತ್ತೆಯಾದ ಪ್ರಕರಣವು ನನ್ನ ಗಮನಕ್ಕೆ ಬಂದಿದೆ. ಗಂಭೀರತೆ ಮತ್ತು ಸೂಕ್ಷ್ಮತೆಯನ್ನು ಪರಿಗಣಿಸಿ ಸರ್ಕಾರವು ತಕ್ಷಣ ಕ್ರಮ ಕೈಗೊಳ್ಳಬೇಕೆಂದು ನಾನು ಒತ್ತಾಯಿಸುತ್ತೇನೆ ಎಂದಿದ್ದಾರೆ.