Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಪಿಎಸ್ಐ ಮರು ಪರೀಕ್ಷೆಗೆ ಕಿವಿ, ಬಾಯಿ ಮುಚ್ಚುವ ವಸ್ತ್ರ ನಿಷೇಧ – ಕೆಇಎ ಸೂಚನೆ

ಬೆಂಗಳೂರು: ಜನವರಿ 23ರಂದು ನಡೆಯುವ ಪಿಎಸ್ ಐ ಮರು ಪರೀಕ್ಷೆಗೆ ಅಭ್ಯರ್ಥಿಗಳು ಕಿವಿ ಮತ್ತು ಬಾಯಿ ಮುಚ್ಚುವಂತಹ ಬಟ್ಟೆಯನ್ನು ಧರಿಸಿದರೆ ಪರೀಕ್ಷಾ ಕೊಠಡಿ ಪ್ರವೇಶವಿಲ್ಲ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಸೂಚಿಸಿದೆ.

ಪಿಎಸ್ ಐ ಪರೀಕ್ಷೆಯ 50 ಅಂಕಗಳ ಮೊದಲ ಪತ್ರಿಕೆಯು ಬೆಳಗ್ಗೆ 10.30ರಿಂದ ಮಧ್ಯಾಹ್ನ 12ರ ವರೆಗೆ ಹಾಗೂ 50 ಅಂಕಗಳ ಎರಡನೇ ಪತ್ರಿಕೆಯು ಅಪರಾಹ್ನ 1ರಿಂದ 2.30ರ ವರೆಗೆ ನಡೆಯುತ್ತದೆ ಎಂದು ಕೆಇಎ ಹೇಳಿದೆ.

ಕೆಇಎ ಯು ಪಿಎಸ್ ಐ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳಿಗೆ ಕೆಲ ಸೂಚನೆ ನೀಡಿದ್ದು, ಅಭ್ಯರ್ಥಿಗಳು ಆದಷ್ಟು ಕಾಲರ್ ಇಲ್ಲದ ಶರ್ಟ್ಗಳನ್ನು ಧರಿಸಬೇಕು. ಜೀನ್ಸ್ ಪ್ಯಾಂಟ್, ಬೆಲ್ಟ್, ಶೂಗಳನ್ನು ಧರಿಸಿ ಪರೀಕ್ಷೆಗೆ ಹಾಜರಾಗುವಂತಿಲ್ಲ. ಹಾಗೂ ಮೊದಲ ಅವಧಿ ಅಂತ್ಯವಾದ ನಂತರ ಅಭ್ಯರ್ಥಿಗಳು ಪರೀಕ್ಷಾ ಕೇಂದ್ರದಿಂದ ಹೊರಗೆ ಹೋಗಬಾರದು ಎಂದು ತಿಳಿಸಿದೆ.

ಪರೀಕ್ಷೆ ಬರೆಯುವ ಅಭ್ಯರ್ಥಿಗಳು ತಮ್ಮ ನಿಗದಿತ ಪರೀಕ್ಷಾ ಕೇಂದ್ರಕ್ಕೆ ಬೆಳಗ್ಗೆ 8.30ಕ್ಕೆ ಸರಿಯಾಗಿ ಹಾಜರಿರಬೇಕು. ಅಭ್ಯರ್ಥಿಗಳು ತಮ್ಮ ಪರೀಕ್ಷಾ ಪ್ರವೇಶ ಪತ್ರದೊಂದಿಗೆ ಕಡ್ಡಾಯವಾಗಿ ಗುರುತಿನ ಚೀಟಿಯಲ್ಲಿ (ಡ್ರೈವಿಂಗ್ ಲೈಸೆನ್ಸ್, ಪಾಸ್ಪೋರ್ಟ್, ಆಧಾರ್ ಕಾರ್ಡ್, ಪಾನ್ ಕಾರ್ಡ್, ಮತದಾರರ ಗುರುತಿನ ಚೀಟಿ) ಯಾವುದಾದರೂ ಒಂದನ್ನು ಪರೀಕ್ಷಾ ಕೇಂದ್ರಕ್ಕೆ ತರಬೇಕು. ಪರೀಕ್ಷಾ ಕೇಂದ್ರದಲ್ಲಿ ಮೊಬೈಲ್ ಫೋನ್ ನಿಷೇಧಿಸಲಾಗಿದ್ದು, ಮೊಬೈಲ್ ನಲ್ಲಿ ತಮ್ಮ ಗುರುತಿನ ಚೀಟಿಯನ್ನು ತೋರಿಸಬಾರದು ಎಂದು ಕೆಇಎ ಸೂಚನೆ ನೀಡಿದೆ.