Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಸಂಸ್ಕರಿಸಿದ ನೀರು ನೇರ ಬಳಕೆ ವಿರುದ್ದ ಕಠಿಣ ಕ್ರಮ: ಸಚಿವ ಭೋಸರಾಜು

ಬೆಂಗಳೂರು : ಎಚ್.ಎನ್ ವ್ಯಾಲಿ ಹಾಗೂ ಕೆ.ಸಿ ವ್ಯಾಲಿ ಏತ ನೀರಾವರಿ ಯೋಜನೆಯ ಮೂಲಕ ಕೆರೆಗಳಿಗೆ ಹರಿಸಲಾಗುತ್ತಿರುವ ಎರಡನೇ ಹಂತದ ಸಂಸ್ಕರಿಸಿದ ನೀರನ್ನ ನೇರವಾಗಿ ಬಳಸುವವರ ವಿರುದ್ದ ಕಠಿಣ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್ ಎಸ್ ಬೋಸರಾಜು ತಿಳಿಸಿದ್ದಾರೆ.

ಈ ಎರಡೂ ವ್ಯಾಲಿಗಳ ಏತ ನೀರಾವರಿ ಯೋಜನೆಯ ಮೂಲಕ ಬಯಲು ಸೀಮೆಯ ಜಿಲ್ಲೆಗಳಾದ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರಕ್ಕೆ ಸಂಸ್ಕರಿಸಿದ ನೀರನ್ನ ಹರಿಸಲಾಗುತ್ತಿದೆ. ಸಂಸ್ಕರಿಸಿದ ನೀರಿನ ಮೂಲಕ ಕೆರೆಗಳನ್ನ ತುಂಬಿಸಲಾಗುತ್ತಿದ್ದು, ಅಂತರ್ಜಲ ಮಟ್ಟ ಹೆಚ್ಚಿಸುವುದು ಪ್ರಮುಖ ಉದ್ದೇಶವಾಗಿದೆ. ಅಂತರ್ಜಲ ಹೆಚ್ಚಳದ ಪ್ರಮುಖ ಗುರಿಯ ಯೋಜನೆಯ ಫಲ ಈಗಾಗಲೇ ಗೋಚರವಾಗುತ್ತಿದೆ. ಈ ಜಿಲ್ಲೆಗಳಲ್ಲಿ ಅಂತರ್ಜಲ ಮಟ್ಟ ಹೆಚ್ಚಳವಾಗಿದ್ದು, ಜನರು ಕೊಳೆವೆ ಬಾವಿಗಳ ಮೂಲಕ ನೀರನ್ನ ತಮ್ಮ ಬೆಳೆಗಳಿಗೆ ಉಪಯೋಗಿಸಬಹುದಾಗಿದೆ. ಸಂಸ್ಕರಿಸಿದ ನೀರನ್ನ ನೇರವಾಗಿ ಕುಡಿಯಲು ಹಾಗೂ ಕೃಷಿಗೆ ಬಳಸುವುದನ್ನ ನಿಷೇಧಿಸಲಾಗಿದೆ.

ಆದರೆ, ಕೆಲವರು ಈ ನೀರನ್ನ ನೇರವಾಗಿ ತಮ್ಮ ಬೆಳೆಗಳಿಗೆ ಬಳಸುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಇಂತಹ ಚಟುವಟಿಕೆಗಳಿಂದ ಯೋಜನೆಯ ಮೂಲ ಉದ್ದೇಶಕ್ಕೆ ತೊಂದರೆಯಾಗುತ್ತಿದೆ. ಸಂಸ್ಕರಿಸಿದ ನೀರು ಉತ್ತಮ ಗುಣಮಟ್ಟದ್ದಾಗಿದೆ. ಆದರೆ, ಇದರ ನೇರ ಬಳಕೆಯಿಂದ ತೊಂದರೆ ಆಗಬಾರದು ಎನ್ನುವ ಮುನ್ನೆಚ್ಚರಿಕೆ ನಮ್ಮದಾಗಿತ್ತು. ಇದನ್ನ ಉಲ್ಲಂಘಿಸುವವರ ವಿರುದ್ದ ಕಠಿಣ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

ಕ್ರಮ ಕೈಗೊಳ್ಳದ ಅಧಿಕಾರಿಗಳ ಮೇಲೂ ಕ್ರಮ:
ಸಂಸ್ಕರಿಸಿದ ನೀರನ್ನ ಜನರು ನೇರವಾಗಿ ತಮ್ಮ ಜಮೀನುಗಳಿಗೆ ಪಂಪ್ ಮಾಡುವುದು ಹಾಗೂ ಹರಿಸುವುದನ್ನ ತಪ್ಪಿಸುವ ನಿಟ್ಟಿನಲ್ಲಿ ಆಗಾಗ್ಗೆ ಅಧಿಕಾರಿಗಳು ಪರಿಶೀಲನೆ ನಡೆಸಬೇಕು. ನೀರನ್ನ ಬಳಸಿಕೊಳ್ಳುತ್ತಿರುವ ಜನರ ಮೇಲೆ ಕ್ರಮ ಕೈಗೊಳ್ಳಬೇಕು, ಕ್ರಮ ಕೈಗೊಳ್ಳಲು ವಿಫಲರಾಗುವ ಅಧಿಕಾರಿಗಳ ಮೇಲೂ ಕ್ರಮ ಕೈಗೊಳ್ಳುವುದಾಗಿ ಸಚಿವರು ಎಚ್ಚರಿಕೆ ನೀಡಿದ್ದಾರೆ.