Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಬ್ರಿಟನ್ ರಾಯಭಾರಿ ಭೇಟಿಗೆ ಭಾರತ ಆಕ್ರೋಶ

ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಒಂದು ಭಾಗವಾದ, ಪಾಕಿಸ್ತಾನ ಅಕ್ರಮವಾಗಿ ಆಕ್ರಮಿಸಿಕೊಂಡಿರುವ ಮೀರ್ ಪುರಕ್ಕೆ ಬ್ರಿಟನ್ ರಾಯಭಾರಿ ಜೇನ್ ಮ್ಯಾರಿಯಟ್ ಅವರು ಭೇಟಿ ನೀಡಿದ್ದು, ಈ ಭೇಟಿಗೆ ಭಾರತ ಸರ್ಕಾರ ಕಿಡಿ ಕಾರಿದೆ.

ಜ.10ರಂದು ಲಂಡನ್ ನಲ್ಲಿ ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರು ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರನ್ನು ಭೇಟಿಯಾಗಿದ್ದರು. ಅದೇ ದಿನವೇ, ಬ್ರಿಟನ್ ರಾಯಭಾರಿ ಜೇನ್ ಮ್ಯಾರಿಯಟ್ ಅವರು ಮೀರ್ ಪುರಕ್ಕೆ ಭೇಟಿ ನೀಡಿದ್ದರು. ಈ ಭೇಟಿಗೆ ಭಾರತ ಸರ್ಕಾರ ಪ್ರತಿಕ್ರಿಯಿಸಿದ್ದು, ‘ಇದು ಅತ್ಯಂತ ಆಕ್ಷೇಪಾರ್ಹ ಭೇಟಿ’ ಎಂದು ಆಕ್ರೋಶ ವ್ಯಕ್ತಪಡಿಸಿದೆ. ಜೊತೆಗೆ ಭಾರತ ಸರ್ಕಾರ ‘ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಕೇಂದ್ರಾಡಳಿತ ಪ್ರದೇಶಗಳು ಭಾರತದ ಅವಿಭಾಜ್ಯ ಅಂಗವಾಗಿಯೇ ಯಾವಾಗಲೂ ಇರಲಿವೆ’ ಎಂದು ಬ್ರಿಟನ್ಗೆ ಸಂದೇಶ ಕಳುಹಿಸಿದೆ.

ಬ್ರಿಟನ್ ರಾಯಭಾರಿ ಮೀರ್ ಪುರಕ್ಕೆ ಭೇಟಿ ನೀಡಿರುವ ಬಗ್ಗೆ ವಿದೇಶಾಂಗ ಕಾರ್ಯದರ್ಶಿ ವಿನಯ್ ಮೋಹನ್ ಕ್ವಾತ್ರಾ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಅವರು ಪಾಕಿಸ್ತಾನದಲ್ಲಿನ ಬ್ರಿಟನ್ ರಾಯಭಾರಿ ಮೀರ್ ಪುರಕ್ಕೆ ಭೇಟಿ ನೀಡಿರುವುದನ್ನು ಭಾರತದ ಸಾರ್ವಭೌಮತ್ವ ಹಾಗೂ ಪ್ರಾದೇಶಿಕ ಸಮಗ್ರತೆಯ ಉಲ್ಲಂಘನೆ ಎಂದೇ ಪರಿಗಣಿಸಲಾಗುತ್ತದೆ ಎಂದು ಭಾರತದಲ್ಲಿನ ಬ್ರಿಟಿಷ್ ರಾಯಭಾರಿ ಅಲೆಕ್ಸ್ ಎಲ್ಲಿಸ್ ಅವರಿಗೆ ತಿಳಿಸಿದ್ದಾರೆ.

ಇನ್ನು ಬ್ರಿಟನ್ ರಾಯಭಾರಿ ಜೇನ್ ಮ್ಯಾರಿಯಟ್ ಅವರು ಮೀರ್ಪುರಕ್ಕೆ ಭೇಟಿ ನೀಡಿರುವ ಫೋಟೋಗಳನ್ನು ‘ಎಕ್ಸ್’ ನಲ್ಲಿ ಹಂಚಿಕೊಂಡಿದ್ದರು. ಫೋಟೋವಿನ ಜೊತೆಗೆ ‘ಬ್ರಿಟನ್ ಮತ್ತು ಪಾಕಿಸ್ತಾನದ ಜನರ ನಡುವಿನ ಬಾಂಧವ್ಯದ ಹೃದಯವಾಗಿರುವ ಮೀರ್ ಪುರದಿಂದ ಸಲಾಮ್! ಶೇಕಡ 70ರಷ್ಟು ಬ್ರಿಟನ್ – ಪಾಕಿಸ್ತಾನಿಯರ ಬೇರುಗಳು ಮೀರ್ ಪುರದಲ್ಲಿದೆ. ಅನಿವಾಸಿಗಳ ಹಿತಾಸಕ್ತಿಗಳಿಗೋಸ್ಕರ ನಾವು ಒಟ್ಟಿಗೆ ಮಾಡುವಂತಹ ಕೆಲಸ ನಿರ್ಣಾಯಕವಾಗಿರುತ್ತದೆ. ನಿಮ್ಮ ಆತಿಥ್ಯಕ್ಕೆ ಧನ್ಯವಾದಗಳು!’ ಎಂದು ಅವರು ಬರೆದುಕೊಂಡಿದ್ದರು.