Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಅಮಿತ್ ಶಾ ಉಪಸ್ಥಿತಿಯಲ್ಲಿ ಲೋಕಸಭಾ ಚುನಾವಣೆ ಕಾರ್ಯತಂತ್ರದ ಚರ್ಚೆ: ವಿಜಯೇಂದ್ರ

ಮೈಸೂರು: ಕೇಂದ್ರ ಗೃಹ ಸಚಿವ ಮಾನ್ಯ ಅಮಿತ್ ಶಾ ಜೀ ಅವರು ರಾತ್ರಿ 2.45ಕ್ಕೆ ತಲುಪಿದ್ದು, ಬೆಳಿಗ್ಗೆ ಕಾರ್ಯಕ್ರಮದಲ್ಲಿ ಕೊಂಚ ಬದಲಾವಣೆ ಆಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ತಿಳಿಸಿದರು.

ಮೈಸೂರಿನಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಇಲ್ಲಿಂದ ನೇರವಾಗಿ ಅವರು ಸುತ್ತೂರಿಗೆ ತೆರಳಿ ಜಾತ್ರಾ ಕಾರ್ಯಕ್ರಮದಲ್ಲಿ ಭಾಗವಹಿಸಿ, ತದನಂತರ ಚಾಮುಂಡಿ ಬೆಟ್ಟಕ್ಕೆ ತೆರಳಿ ತಾಯಿಯ ದರ್ಶನ ಪಡೆಯಲಿದ್ದಾರೆ. ಮಧ್ಯಾಹ್ನ ಇಲ್ಲಿ ಕೋರ್ ಕಮಿಟಿ ಮೀಟಿಂಗ್ ಇದೆ. ಅದಾದ ನಂತರ ರ್ಯಾಡಿಸನ್ ಹೋಟೆಲ್‍ನಲ್ಲಿ ನಡೆಯುವ 4 ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಯ ಮೈಸೂರು ಕ್ಲಸ್ಟರ್‍ನ ಪ್ರಮುಖರ ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದರು.

ಇವತ್ತು ಮೈಸೂರು, ಮಂಡ್ಯ, ಹಾಸನ ಮತ್ತು ಚಾಮರಾಜನಗರ ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಯ ಪ್ರಮುಖರ ಸಭೆ ಕರೆದಿದ್ದೇವೆ. 4 ಲೋಕಸಭಾ ಕ್ಷೇತ್ರಗಳ 100-120 ಪ್ರಮುಖರು ಆ ಸಭೆಯಲ್ಲಿ ಭಾಗವಹಿಸುತ್ತಾರೆ. ಮುಂದಿನ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾರ್ಯತಂತ್ರ ಹೇಗಿರಬೇಕು, ಬಿಜೆಪಿ- ಜೆಡಿಎಸ್ ಒಟ್ಟಾಗಿ ಚುನಾವಣೆ ಎದುರಿಸುತ್ತಿದ್ದು, ತಳಹಂತದಲ್ಲಿ ಕಾರ್ಯಕರ್ತರ ಮಧ್ಯೆ ಸಮಸ್ಯೆ ಇಲ್ಲದೇ ಚುನಾವಣೆ ಎದುರಿಸಬೇಕಿದೆ. ಈ ನಿಟ್ಟಿನಲ್ಲೂ ಚರ್ಚೆಗಳು ಆಗಲಿವೆ ಎಂದು ತಿಳಿಸಿದರು.
ಪ್ರತಿಯೊಂದು ಕ್ಷೇತ್ರವನ್ನೂ ಗೆಲ್ಲುವ ನಿಟ್ಟಿನಲ್ಲಿ ಕಾರ್ಯತಂತ್ರ ರೂಪಿಸಲಿದ್ದೇವೆ. ಚುನಾವಣಾ ಚಾಣಕ್ಯ ಎಂದು ಪ್ರಖ್ಯಾತಿ ಪಡೆದ ಅಮಿತ್ ಶಾ ಜೀ ಅವರ ಸಲಹೆಗಳನ್ನೂ ಪಡೆಯಲಿದ್ದೇವೆ ಎಂದು ಪ್ರಶ್ನೆಗೆ ಉತ್ತರ ಕೊಟ್ಟರು. ಬಿಜೆಪಿ- ಜೆಡಿಎಸ್ 28 ಕ್ಷೇತ್ರಗಳಲ್ಲೂ ಗೆಲ್ಲುವ ಕಾರ್ಯತಂತ್ರ ರೂಪಿಸುತ್ತೇವೆ. ಇದು ಮುಖ್ಯಮಂತ್ರಿಗಳ ತವರೂರು ಎನ್ನುವುದಕ್ಕಿಂತ ಬಿಜೆಪಿ ಭದ್ರಕೋಟೆಯೂ ಹೌದು. ಪ್ರತಿ ಚುನಾವಣೆಯಲ್ಲೂ ಇಲ್ಲಿನ ಜನತೆ ಬಿಜೆಪಿಗೆ ಬೆಂಬಲ ಕೊಟ್ಟಿದ್ದಾರೆ. ಚಾಮರಾಜನಗರ ಲೋಕಸಭಾ ಕ್ಷೇತ್ರದ ಹಿರಿಯರಾದ ಶ್ರೀನಿವಾಸ ಪ್ರಸಾದ್ ಜೀ ಅವರು ರಾಜಕೀಯ ನಿವೃತ್ತಿ ಘೋಷಿಸಿರುವ ಈ ಸಂದರ್ಭದಲ್ಲಿ ಸೂಕ್ತ ಅಭ್ಯರ್ಥಿ ಹುಡುಕಿ ಗೆಲ್ಲುವ ಕಾರ್ಯತಂತ್ರ ರೂಪಿಸುತ್ತೇವೆ ಎಂದು ತಿಳಿಸಿದರು.