Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

‘ರಾಜ್ಯಸಭಾ ಚುನಾವಣೆ ಕಣಕ್ಕೆ ಕುಪೇಂದ್ರ ರೆಡ್ಡಿ’ – ಬಿ.ವೈ.ವಿಜಯೇಂದ್ರ

ಬೆಂಗಳೂರು: ರಾಜ್ಯಸಭಾ ಚುನಾವಣೆಗೆ ಅಭ್ಯರ್ಥಿಯಾಗಿ ಕುಪೇಂದ್ರ ರೆಡ್ಡಿ ಅವರು ನಾಮಪತ್ರ ಸಲ್ಲಿಸುತ್ತಿದ್ದಾರೆ. ಕುಪೇಂದ್ರ ರೆಡ್ಡಿ ಅವರು ನಾಮಪತ್ರ ಸಲ್ಲಿಸುತ್ತಿದ್ದಾರೆ ಎಂದರೆ ಜೆಡಿಎಸ್ ಕಾರ್ಯತಂತ್ರಗಳು ಇದ್ದೇ ಇರುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ತಿಳಿಸಿದರು.

ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಇಂದು ಮಾತನಾಡಿದ ಅವರು, ಜೆಡಿಎಸ್ ಪಕ್ಷ ಎನ್‍ಡಿಎ ಕೂಟಕ್ಕೆ ಸೇರಿದ ನಂತರ ಯಾವುದೇ ಹೋರಾಟ ಮತ್ತು ತೀರ್ಮಾನಗಳನ್ನು ಜಂಟಿಯಾಗಿಯೇ ತೆಗೆದುಕೊಳ್ಳುತ್ತಿದ್ದೇವೆ. ನಿನ್ನೆ ನಮ್ಮ ಕೇಂದ್ರದ ವರಿಷ್ಠರು ಮತ್ತು ಜೆಡಿಎಸ್ ನ ರಾಜ್ಯದ ಹಿರಿಯರು ಚರ್ಚೆ ಮಾಡಿ ರಾಜ್ಯಸಭೆಗೆ 5ನೇ ಅಭ್ಯರ್ಥಿಯಾಗಿ ಕುಪೇಂದ್ರ ರೆಡ್ಡಿಯವರನ್ನು ಕಣಕ್ಕೆ ಇಳಿಸಲು ನಿರ್ಧರಿಸಿದ್ದಾಗಿ ವಿವರಿಸಿದರು. ಬಿಜೆಪಿ- ಜೆಡಿಎಸ್ ಒಟ್ಟಾಗಿ ನಮ್ಮ ಅಭ್ಯರ್ಥಿ ಗೆಲ್ಲುವ ದೃಷ್ಟಿಯಿಂದ ತಂತ್ರಗಾರಿಕೆಯನ್ನು ಮುಂದಿನ ದಿನಗಳಲ್ಲಿ ರೂಪಿಸಲಿದ್ದೇವೆ ಎಂದರು.
ಬೇಕಾದ ಹೆಚ್ಚುವರಿ ಮತಗಳ ಕುರಿತು ಚರ್ಚಿಸುತ್ತೇವೆ ಎಂದು ಪ್ರಶ್ನೆಗೆ ಉತ್ತರಿಸಿದರು. ಸಿದ್ದರಾಮಯ್ಯನವರಿಂದ ಬಜೆಟ್ ಮೂಲಕ ಏನನ್ನು ನಿರೀಕ್ಷಿಸಲು ಸಾಧ್ಯ ಎಂಬುದು ತಮಗೇ ಗೊತ್ತಿದೆ. ಖಜಾನೆ ಖಾಲಿ ಮಾಡಿಕೊಂಡು ಯಾವುದೇ ಅಭಿವೃದ್ಧಿ ಮಾಡದೆ ಇರುವ ರಾಜ್ಯ ಸರಕಾರವು ತನ್ನ ವೈಫಲ್ಯಗಳನ್ನು ಮುಚ್ಚಿ ಹಾಕಲು ದೆಹಲಿಯಲ್ಲಿ ಹೋಗಿ ನಾಟಕ ಮಾಡಿತ್ತು. ನಾಳೆ ಅವರು ಮಂಡಿಸುವ ಬಜೆಟ್ ಬಗ್ಗೆ ಜನರೂ ನಿರೀಕ್ಷೆ ಇಟ್ಟುಕೊಂಡಿಲ್ಲ; ನಮ್ಮಲ್ಲೂ ಸಹ ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ, ರಾಜ್ಯದ ಹಿತದೃಷ್ಟಿಗಾಗಿ ಉತ್ತಮ ಬಜೆಟ್ ಕೊಡಬಹುದೆಂಬ ಅಪೇಕ್ಷೆ ಇಲ್ಲ ಎಂದು ಇನ್ನೊಂದು ಪ್ರಶ್ನೆಗೆ ಉತ್ತರ ಕೊಟ್ಟರು.

ಜನರ ಕಿವಿಗೆ ಹೂ ಮುಡಿಸುವ ಕೆಲಸ.
ಕಾಂಗ್ರೆಸ್ ಪಕ್ಷವು ಚುನಾವಣೆ ಸಂದರ್ಭದಲ್ಲಿ ಹಲವಾರು ಸುಳ್ಳುಗಳನ್ನು ಹೇಳಿ ಜನರ ವಿಶ್ವಾಸ ಗೆದ್ದು ಅಧಿಕಾರಕ್ಕೆ ಬಂದಿತ್ತು. ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಅನೇಕ ತಂತ್ರಗಳನ್ನು ಮಾಡುತ್ತಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಗೆಲ್ಲಲು ಅವರದೇ ಆದ ತಂತ್ರಗಾರಿಕೆ, ರಾಜ್ಯದ ಜನರ ಕಿವಿಗೆ ಹೂ ಮುಡಿಸುವ ಕೆಲಸವನ್ನು ಮಾಡುತ್ತಾರೆ. ಆದರೆ, ಈ ಬಾರಿ ಅವರು ಯಶಸ್ವಿಯಾಗುವುದಿಲ್ಲ. ಜನರು ಪ್ರಜ್ಞಾವಂತರಿದ್ದಾರೆ. ಸಿದ್ದರಾಮಯ್ಯ ಅವರ ನೇತೃತ್ವದ ರಾಜ್ಯ ಸರಕಾರ ಆರೆಂಟು ತಿಂಗಳಲ್ಲೇ ಜನರ ವಿಶ್ವಾಸ ಕಳಕೊಂಡಿದೆ ಎಂದ ಅವರು, ಸಹಜವಾಗಿ ಬಜೆಟ್‍ನಲ್ಲಿ ಏನೂ ನಿರೀಕ್ಷೆ ಇಡಲು ಅಸಾಧ್ಯ ಎಂದು ವಿಶ್ಲೇಷಣೆ ಮಾಡಿದರು.