Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

2 ಕೋಟಿ ಮೌಲ್ಯದ ನವಿಲು ಗರಿ ಮುಂಬೈನಿಂದ ಚೀನಾಕ್ಕೆ ಕಳ್ಳಸಾಗಣೆ….!!

ಮುಂಬೈನ ಕಳ್ಳಸಾಗಣೆ ನಿಗ್ರಹ ದಳ ಬೃಹತ್ ನವಿಲು ಗರಿ ಸ್ಮಗ್ಲಿಂಗ್ ಜಾಲವನ್ನು ಭೇದಿಸುವಲ್ಲಿ ಯಶಸ್ವಿಯಾಗಿದೆ. ಭಾರತದಿಂದ ಚೀನಾಕ್ಕೆ ಬರೋಬ್ಬರಿ 28 ಲಕ್ಷ ನವಿಲುಗರಿಗಳನ್ನು ಅಕ್ರಮವಾಗಿ ಸಾಗಾಟ ಮಾಡಲು ಯತ್ನಿಸುತ್ತಿದ್ದ ಪ್ರಕರಣವನ್ನು ಮುಂಬೈ ವಲಯದ ಕಳ್ಳಸಾಗಣೆ ನಿಗ್ರಹ ದಳವಾದ ಡೈರೆಕ್ಟೋರೇಟ್‌ ಆಫ್‌ ರೆವಿನ್ಯೂ ಇಂಟೆಲಿಜೆನ್ಸ್‌ (ಡಿಆರ್‌ ಐ) ಅಧಿಕಾರಿಗಳು ಪತ್ತೆ ಹಚ್ಚಿ, ನವೀಲುಗರಿಗಳನ್ನು ವಶಪಡಿಸಿಕೊಂಡಿರುವುದಾಗಿ ವರದಿ ತಿಳಿಸಿದೆ. ಜವಾಹರಲಾಲ್‌ ನೆಹರು ಬಂದರು ಅಥಾರಿಟಿ ಮೂಲಕ “ಡೋರ್‌ ಮ್ಯಾಟ್‌ ತೆಂಗಿನ ನಾರು” ಎಂದು ಸುಳ್ಳು ಹೇಳಿ ನವಿಲುಗರಿಯನ್ನು ರಫ್ತು ಮಾಡಲು ಬಂಡಲ್‌ ಮಾಡಿ ಇಡಲಾಗಿತ್ತು. ಆದರೆ ಡಿಆರ್‌ ಐಗೆ ಲಭಿಸಿದ ಮಾಹಿತಿ ಮೇರೆಗೆ ಸರಕು ರವಾನೆಯನ್ನು ಕೂಲಂಕಷವಾಗಿ ಪರಿಶೀಲಿಸಿದಾಗ ಅಂದಾಜು 28 ಲಕ್ಷ ನವಿಲು ಗರಿ ಪತ್ತೆಯಾಗಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. 1962ರ ಕಸ್ಟಮ್ಸ್‌ ಕಾಯ್ದೆಯ ಸೆಕ್ಷನ್‌ 110ರ ಅನ್ವಯ ಸುಮಾರು 2.10 ಕೋಟಿ ರೂಪಾಯಿ ಮೌಲ್ಯದ ನವಿಲುಗರಿಯನ್ನು ವಶಪಡಿಸಿಕೊಳ್ಳಲಾಗಿದೆ. 1972ರ ವನ್ಯಜೀವಿ ರಕ್ಷಣಾ ಕಾಯ್ದೆಯ ಶೆಡ್ಯೂಲ್‌ 2ರ ಪ್ರಕಾರ ನವಿಲುಗರಿ ರಫ್ತು ನಿಷೇಧಿಸಲಾಗಿತ್ತು.ನವಿಲು ಗರಿ ಕಳ್ಳಸಾಗಣೆ ಮಾಡುತ್ತಿರುವುದನ್ನು ಬಂಧಿತ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ. ಆರೋಪಿಗಳನ್ನು ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟಿಯನ್‌ ಕೋರ್ಟ್‌ ಗೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಿರುವುದಾಗಿ ವರದಿ ತಿಳಿಸಿದೆ.