Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ನಿಮ್ಮನ್ನು ನೀವು ಇಷ್ಟಪಡುವುದರಿಂದ ಜೀವನದಲ್ಲಿ ಏನಾಗುತ್ತೆ ಗೊತ್ತಾ..?

ನಾನು ತಪ್ಪಗಿದ್ದೇನೆ, ಕಪ್ಪಗಿದ್ದೇನೆ, ಕೂದಲು ಚೆನ್ನಾಗಿಲ್ಲ ಹೀಗೆ ನಮ್ಮ ಶರೀರದ ಬಗ್ಗೆ ನಾವೇ ಚಿಂತಿಸುವುದುಂಟು, ಅಂಥ ಚಿಂತೆಯೇ ನಮ್ಮಲ್ಲಿನ ಆತ್ಮವಿಶ್ವಾಸ ಕುಗ್ಗಿಸಿರುತ್ತದೆ. ನಾವು ಹೇಗೆ ಇದ್ದೇವೋ ಹಾಗೆ ಸ್ವೀಕರಿಸಲು ನಾವೇ ಸಿದ್ದರಿರುವುದಿಲ್ಲ, ಹಾಗಾಗಿ ಯಾರಾದರೂ ಸ್ವಲ್ಪ ಏನಾದರೂ ಹೇಳಿದರೆ ಸಾಕು ಕುಗ್ಗಿ ಹೋಗಿ ಬಿಡುತ್ತೇವೆ.

ಯ್ಯೋ ನಾನು ತಪ್ಪಗಿದ್ದೇನೆ, ಕಪ್ಪಗಿದ್ದೇನೆ, ಕೂದಲು ಚೆನ್ನಾಗಿಲ್ಲ ಹೀಗೆ ನಮ್ಮ ಶರೀರದ ಬಗ್ಗೆ ನಾವೇ ಚಿಂತಿಸುವುದುಂಟು, ಅಂಥ ಚಿಂತೆಯೇ ನಮ್ಮಲ್ಲಿನ ಆತ್ಮವಿಶ್ವಾಸ ಕುಗ್ಗಿಸಿರುತ್ತದೆ. ನಾವು ಹೇಗೆ ಇದ್ದೇವೋ ಹಾಗೆ ಸ್ವೀಕರಿಸಲು ನಾವೇ ಸಿದ್ದರಿರುವುದಿಲ್ಲ, ಹಾಗಾಗಿ ಯಾರಾದರೂ ಸ್ವಲ್ಪ ಏನಾದರೂ ಹೇಳಿದರೆ ಸಾಕು ಕುಗ್ಗಿ ಹೋಗಿ ಬಿಡುತ್ತೇವೆ. ಆದರೆ ನೀವು ನಿಮ್ಮನ್ನೇ ಪ್ರೀತಿಸಲು ಪ್ರಾರಂಭಿಸಿ ನೋಡಿ, ನಿಮ್ಮ ಬದುಕೇ ಬದಲಾಗಬಹುದು. ಹೌದು ನೀವೇ ಯೋಚಿಸಿ ನೋಡಿ, ನಿಮ್ಮ ಶರೀರದ ಬಗ್ಗೆ ನೀವೇ ಅಸಮಧಾನ ಹೊಂದಿದ್ದರೆ ಇತರರು ಆ ಬಗ್ಗೆ ಹೇಳಬಾರದು ಎಂದು ಬಯಸುವುದು ಎಷ್ಟು ಸರಿ?

ಶರೀರ ದಪ್ಪಗಿದೆಯೇ? ಅಯ್ಯೋ ದಪ್ಪಗಿದ್ದೇನೆ ಎಂದು ಕುಗ್ಗುವ ಬದಲು ಆ ಶರೀರವನ್ನು ಇಷ್ಟಪಡಿ, ಕಪ್ಪಗಿದೆಯೇ ಇರಲಿ ಬಿಡಿ, ಮೈ ಬಣ್ಣದಿಂದ ನಿಮ್ಮ ಸೌಂದರ್ಯ ಅಳೆಯುವುದೇಕೆ? ನಮ್ಮ ಶರೀರದ ಜೊತೆ ಬದುಕುತ್ತಿರುವವರು ನಾವು, ನಾವೇ ಆ ದೇಹವನ್ನು ಪ್ರೀತಿಸದಿದ್ದರೆ? ಆದ್ದರಿಂದ ಮೊದಲು ನಿಮ್ಮನ್ನು ನೀವು ಇಷ್ಟಪಡಬೇಕು, ಪ್ರೀತಿಸಬೇಕು ಆಗ ನೀವು ನಿಮ್ಮ ಆತ್ಮವಿಶ್ವಾಸ ಹೆಚ್ಚಾಗಿರುವುದನ್ನು ಗಮನಿಸಿರಬಹುದು, ಅಲ್ಲದೆ ಯಾವಾಗ ನೀವು ನಿಮ್ಮನ್ನು ಇಷ್ಟಪಡಲು ಪ್ರಾರಂಭಿಸುತ್ತೀರೋ ಆ ವ್ಯಕ್ತಿತ್ವ ಇತರರನ್ನು ನಿಮ್ಮತ್ತ ಆಕರ್ಷಿಸುವಂತೆ ಮಾಡುತ್ತದೆ.

ನಾವಿಲ್ಲಿ ಈಗಾಗಲೇ ನೀವು ನಿಮ್ಮ ಶರೀರದ ಬಗ್ಗೆ ಕೆಲವೊಂದು ಕೀಳೆರಿಮೆ ಹೊಂದಿದ್ದರೆ ಅದನ್ನು ಹೊರಹಾಕಿ, ಆತ್ಮವಿಶ್ವಾಸ ಹೆಚ್ಚಿಸಲು ನೀವೇನು ಮಾಡಬೇಕೆಂದು ಮಾನಸಿಕ ತಜ್ಞರು ನೀಡಿರುವ ಟಿಪ್ಸ್ ಹೇಳಿದ್ದೇವೆ, ನೀವು ಈ ಟಿಪ್ಸ್ ಅನುಸರಿದ್ದೇ ಆದರೆ ಜಗತ್ತಿನಲ್ಲಿ ಯಾವ ವ್ಯಕ್ತಿಗೂ ನಿಮ್ಮನ್ನು ಕುಗ್ಗಿಸಲು ಸಾಧ್ಯವಾಗಲ್ಲ ನೋಡಿ:

ನಿಮ್ಮ ಶರೀರದ ಆರೈಕೆ ಮಾಡಿ

ಶರೀರ ಆರೈಕೆ ಎಂದರೆ ಅದು ದೈಹಿಕವಾಗಿ, ಮಾನಸಿಕವಾಗಿ ಹಾಗೂ ಭಾವನಾತ್ಮಕವಾಗಿ ಆರೈಕೆ ಮಾಡುವುದಾಗಿದೆ.

ಹೇಗೆ?

* ನಿಮಗೆ ಇಷ್ಟವಾದ ಸಿನಿಮಾ ನೋಡುವುದು

* ಆಟವಾಡುವುದು

* ನಿಮಗೆ ಇಷ್ಟವಾದ ಅಡುಗೆ ಮಾಡುವುದು

* ಮನೆಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವುದು

* ವ್ಯಾಯಾಮ

ಭೂತ ಹಾಗೂ ಭವಿಷ್ಯತ್‌ ಕಾಲದ ಬಗ್ಗೆ ತುಂಬಾ ಚಿಂತಿಸದೆ ವರ್ತಮಾನದಲ್ಲಿ ಜೀವಿಸಿ ನಿಮ್ಮ ದೇಹ ಏನು ಹೇಳುತ್ತದೆ ಅದನ್ನು ಆಲಿಸಿ.

ನಿಮ್ಮ ದೇಹ ತುಂಬಾ ಬಳಲಿದರೆ ಅದನ್ನು ಮತ್ತಷ್ಟು ಬಳಲು ಬಿಡಬೇಡಿ, ಅಲ್ಲದೆ ಈ ರೀತಿ ಮಾಡುವುದರಂದ ನಿಮ್ಮ ದೇಹದ ಆರೋಗ್ಯ ಹೆಚ್ಚುವುದು.

* ಧ್ಯಾನ

* ಉಸಿರಾಟದ ವ್ಯಾಯಾಮ

* ನಿಮ್ಮ ಪಂಚೇಂದ್ರೀಯದ ಕಡೆ ಗಮನ ನೀಡುವುದು.

ನಕಾರಾತ್ಮಕ ಆಲೋಚನೆಗಳನ್ನು ಪ್ರಶ್ನಿಸಿ

ಅಯ್ಯೋ ನನ್ನಿಂದ ಪ್ರಯೋಜನನೇ ಇಲ್ಲ ಅಥವಾ ನನ್ನಿಂದ ಇದು ಸಾಧ್ಯವೇ ಇಲ್ಲ ಎಂದು ಆಲೋಚಿಸುವುದು ಬಿಟ್ಟು ಏಕೆ ಸಾಧ್ಯವಿಲ್ಲ ಎಂದು ಪ್ರಶ್ನೆ ಮಾಡಿ, ನನ್ನಿಂದ ಪ್ರಯೋಜನನೇ ಇಲ್ಲ ಎಂದು ಯೋಚಿಸುವ ಬದಲು ನಿಮ್ಮಲ್ಲಿರುವ ಇತರ ಧನಾತ್ಮಕ ಗುಣಗಳತ್ತ ಗಮನ ಹರಿಸಿ.

ಹೆಚ್ಚಿನ ಬಾರಿ ಹೊರಗಿನ ವಾತಾವರಣ ನಿಮ್ಮ ನಿರ್ಧಾರದ ಮೇಲೆ ತುಂಬಾ ಪ್ರಭಾವ ಬೀರುತ್ತದೆ. ಕೆಲವೊಮ್ಮೆ ಬೇರೆಯವರಿಗೇ ಬೇಡವಾಗಬಹುದು, ಅದೇ ಕೆಲವೊಮ್ಮೆ ನಿಮ್ಮ ಅವಶ್ಯಕತೆ ಬಿದ್ದಾಗ ನಿಮ್ಮ ಬಳಿ ಅವರು ಬರಬಹುದು, ಆದ್ದರಿಂದ ನಿಮ್ಮನ್ನು ನೀವು ದೂಷಿಸಬೇಡಿ.

ಕೆಲವೊಂದು ಮಿತಿಗಳನ್ನು ಹಾಕಿಕೊಳ್ಳಿ

ಹೌದು ದೈಹಿಕವಾಗಿ ಹಾಗೂ ಮಾನಸಿಕವಾಗಿ ನಿಮಗೇ ನೀವೇ ಮಿತಿಯನ್ನು ಹಾಕಿಕೊಳ್ಳಿ. ಅದನ್ನು ಮೀರಲು ಯಾರಾದರೂ ಪ್ರಯತ್ನಿಸಿದರೆ ಮುಲಾಜಿಲ್ಲದೆ ಅವರನ್ನು ನಿರ್ಲಕ್ಷ್ಯ ಮಾಡಿ, ಇದರಿಂದ ಏನೂ ತಪ್ಪಿಲ್ಲ.

* ಬೇರೆಯವರ ಬಗ್ಗೆ ತುಂಬಾ ಯೋಚಿಸಿ ನೀವು ಕೊರಗುವ ಬದಲು ನಿಮ್ಮ ಬಗ್ಗೆ ನೀವು ಯೋಚಿಸಿ.

* ಕೆಲವೊಂದು ವಿಷಯದಲ್ಲಿ ಯಾವುದೇ ಅಂಜಿಕೆ ಇಲ್ಲದೆ ನೋ ಅನ್ನಿ.

* ನಿಮಗಾಗಿ, ನಿಮ್ಮ ಅವಶ್ಯಕತೆಗಾಗಿ ಪ್ರಯತ್ನಪಡಿ.

ನಿಮ್ಮನ್ನು ಇತರರೊಂದಿಗೆ ಹೋಲಿಸುವುದನ್ನು ಮೊದಲು ನಿಲ್ಲಿಸಿ

ಮೊದಲಿಗೆ ನೀವು ನಿಮ್ಮನ್ನು ಇತರರೊಂದಿಗೆ ಹೋಲಿಸುವುದನ್ನು ನಿಲ್ಲಿಸಿ. ಅದರಲ್ಲೂ ನಿಮ್ಮ ಫ್ರೆಂಡ್‌ನ ಸೋಷಿಯಲ್ ಮೀಡಿಯಾದಲ್ಲಿ ಅವರು ಹಾಕಿದ ಅಷ್ಟೂ ಪೋಸ್ಟ್‌ಗಳು ನೈಜಕತೆಗೆ ಹತ್ತಿರವಿರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಆದ್ದರಿಂದ ಅವುಗಳನ್ನು ನೋಡಿ ನೀವು ನಿಮ್ಮನ್ನು ಅವರೊಮದಿಗೆ ಹೋಲಿಸಿ ಕುಗ್ಗಬೇಡಿ. ನಿಮ್ಮ ಬದುಕು ನಿಮಗೆ, ಅವರ ಬದುಕು ಅವರಿಗೆ ಎಂಬುವುದು ನೆನಪಿರಲಿ. ಇಷ್ಟು ಮಾಡಿ ನೋಡಿ, ನಿಮ್ಮಲ್ಲಿ ಅಂಜಿಕೆ, ಕೀಳೆರಿಮೆ ದೂರವಾಗಿ ಅಲ್ಲಿ ಆತ್ಮವಿಶ್ವಾಸ ತುಂಬಿ ತುಳುಕುತ್ತದೆ, ಅದೇ ನಿಮ್ಮಲ್ಲಿ ಒಂದು ಆಕರ್ಷಕ ವ್ಯಕ್ತಿತ್ವ ರೂಪಿಸುವುದು.