Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

‘ಐದು ಪೈಸೆ ಲಂಚ ಯಾರಾದರೂ ನನಗೆ ಕೊಟ್ಟಿದ್ದು ಸಾಬೀತಾದರೆ ರಾಜಕೀಯ ನಿವೃತ್ತಿ’- ಸಿಎಂ ಸವಾಲು

ಬೆಂಗಳೂರು:ಸಣ್ಣ ಗುತ್ತಿಗೆದಾರರ ಅನುಕೂಲಕ್ಕಾಗಿ 4 ಸಾವಿರ ಕೋಟಿ ರೂಪಾಯಿಯ ಕಾಮಗಾರಿಯನ್ನು ಪ್ಯಾಕೇಜ್ ಇಲ್ಲದೆ ನೀಡಲು ಲೋಕೋಪಯೋಗಿ ಸಚಿವರಿಗೆ ಸೂಚಿಸಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಅರಮನೆ ಮೈದಾನದಲ್ಲಿ ನಡೆದ ಗುತ್ತಿಗೆದಾರರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.ಪ್ಯಾಕೇಜ್ ಪದ್ದತಿ ರದ್ದುಗೊಳಿಸುವುದು, ಬಾಕಿ ಮೊತ್ತವನ್ನು ಪಾವತಿಸುವುದು ಸೇರಿದಂತೆ ಗುತ್ತಿಗೆದಾರರು ಮುಂದಿಟ್ಟ ಎಲ್ಲಾ ಬೇಡಿಕೆಗಳ ಕುರಿತು ಮುಖ್ಯಮಂತ್ರಿಗಳು ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದರು.

ಭದ್ರಾ ಮೇಲ್ದಂಡೆ ಯೋಜನೆಗೆ 5300 ಕೋಟಿ ನೀಡುವುದಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಆಗಿನ ಸಿಎಂ ಬಸವರಾಜ ಬೊಮ್ಮಾಯಿ ಇಬ್ಬರೂ ಬಜೆಟ್ ನಲ್ಲೇ ಘೋಷಿಸಿದರು. ಆದರೆ ಇವತ್ತಿನವರೆಗೂ ಒಂದೇ ಒಂದು ರೂಪಾಯಿ ಕೊಟ್ಟಿಲ್ಲ. ಕೇಂದ್ರ ಸರ್ಕಾರ ಎಷ್ಟೇ ಅಸಹಕಾರ ಕೊಟ್ಟರೂ ಗುತ್ತಿಗೆದಾರರ ಅಷ್ಟೂ ಹಣವನ್ನು ನಾವೇ ಹಂತ ಹಂತವಾಗಿ ಪಾವತಿಸುತ್ತೇವೆ ಎಂದರು.

2013-2018 ರ ಅವಧಿಯಲ್ಲಾಗಲೀ, ಎರಡನೇ ಬಾರಿ CM ಆಗಿರುವ ಅವಧಿಯಲ್ಲಾಗಲೀ LOC ಗೆ ಐದು ಪೈಸೆ ಲಂಚ ಯಾರಾದರೂ ನನಗೆ ಕೊಟ್ಟಿದ್ದು ಸಾಬೀತಾದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಬಿಜೆಪಿಯವರ ಟೀಕೆಗಳಿಗೆ ಸಿ.ಎಂ ಸವಾಲು ಹಾಕಿದರು.

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರಾದ ಸತೀಶ್ ಜಾರಕಿಹೊಳಿ, ಬೋಸ್ ರಾಜು, ಜಮೀರ್ ಅಹಮದ್ ಖಾನ್ ಸೇರಿ ಗುತ್ತಿಗೆದಾರರ ಸಂಘದ ಅಧ್ಯಕ್ಷರಾದ ಕೆಂಪಣ್ಣ ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.