Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ರಾಜ್ಯದ ಮಹಾನಗರ ಪಾಲಿಕೆಗಳಲ್ಲಿ ಇನ್ಮುಂದೆ ಭಾನುವಾರವೂ ‘ಸಬ್ ರಿಜಿಸ್ಟರ್ ಕಚೇರಿ’ ಓಪನ್

ಬೆಂಗಳೂರು: ಬೆಂಗಳೂರು ಸೇರಿದಂತೆ ರಾಜ್ಯದ ಇತರೆ ಮಹಾನಗರ ಪಾಲಿಕೆ ವ್ಯಾಪ್ತಿಯ ಯಾವುದಾದರೂ ಒಂದು ನೋಂದಣಾಧಿಕಾರಿಗಳ ಕಚೇರಿ ಇನ್ನು ಮುಂದೆ ಭಾನುವಾರವೂ ಕಾರ್ಯನಿರ್ವಹಿಸುವಂತೆ ಕ್ರಮ ಕೈಗೊಂಡಿರುವುದಾಗಿ ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕೆಲಸದ ಒತ್ತಡದಿಂದಾಗಿ ರಜೆ ಮಾಡುವುದಕ್ಕೆ ಕಷ್ಟವಾಗುವವರ ಅನುಕೂಲಕ್ಕೆ ಈ ವ್ಯವಸ್ಥೆ ಮಾಡಲಾಗಿದೆ. ಪಾಲಿಕೆ ವ್ಯಾಪ್ತಿಯಲ್ಲಿ6 ರಿಂದ 7 ನೋಂದಣಾಧಿಕಾರಿಗಳ ಕಚೇರಿಗಳಿದ್ದು, ರೋಸ್ಟರ್‌ ಆಧಾರದಲ್ಲಿ ಒಂದೊಂದು ವಾರ ಒಂದೊಂದು ನೋಂದಣಾಧಿಕಾರಿಗಳ ಕಚೇರಿ ಕಾರ್ಯ ನಿರ್ವಹಿಸುವಂತೆ ಸೂಚಿಸಲಾಗಿದೆ. ಭಾನುವಾರ ಕೆಲಸ ಮಾಡುವ ಅಧಿಕಾರಿ, ಸಿಬ್ಬಂದಿಗೆ ಮಂಗಳವಾರ ಪರ್ಯಾಯ ರಜೆ ನೀಡಲಾಗುವುದು ಎಂದಿದ್ದಾರೆ.

ಪಹಣಿಗಳಿಗೆ ಆಧಾರ್‌ ಜೋಡಣೆ ಕಾರ್ಯಕ್ಕೆ ಈಗಾಗಲೇ ಪ್ರಾಯೋಗಿಕವಾಗಿ ಚಾಲನೆ ನೀಡಲಾಗಿದೆ. ಅದರಂತೆ 19 ಲಕ್ಷ ಪಹಣಿದಾರರನ್ನು ಸಂಪರ್ಕಿಸಿ ಆಧಾರ್‌ ಜೋಡಣೆ ಮಾಡುವಂತೆ ಕೋರಲಾಗಿದೆ. ಏ.1ರಿಂದ ಅಧಿಕೃತವಾಗಿ ನನ್ನ ಆಸ್ತಿ ಹೆಸರಿನಲ್ಲಿ ನನ್ನ ಭೂಮಿ-ನನ್ನ ಗುರುತು ಧ್ಯೇಯದೊಂದಿಗೆ ಆಧಾರ್‌ ಜೋಡಣೆ ಕಾರ್ಯ ಆರಂಭಿಸಲಾಗುತ್ತದೆ. 19ಲಕ್ಷ ಪಹಣಿದಾರರ ಪೈಕಿ 6ಲಕ್ಷ ಪಹಣಿದಾರರು ಮೃತಪಟ್ಟಿರುವುದು ತಿಳಿದು ಬಂದಿದೆ.

ಆಸ್ತಿ ಮೇಲೆ ಸಾಲ ಪಡೆಯುವುದು ಸೇರಿದಂತೆ ಹಲವು ವ್ಯವಹಾರಗಳ ಸಂಬಂಧ ಪಹಣಿಯಲ್ಲಿ ದಾಖಲಿಸುವ ಮ್ಯುಟೇಷನ್‌ ಕ್ರಮವನ್ನು ಸ್ವಯಂಚಾಲಿತಗೊಳಿಸುವ ವ್ಯವಸ್ಥೆ ಮಂಗಳವಾರದಿಂದಲೇ ರಾಜ್ಯಾದ್ಯಂತ ಜಾರಿಗೆ ಬಂದಿದೆ. ಇದರಿಂದ ಇನ್ನುಮುಂದೆ ಸಣ್ಣ ಕೆಲಸಗಳಿಗೂ ಗ್ರಾಮ ಲೆಕ್ಕಿಗ ಸೇರಿ ಇನ್ನಿತರ ಸರ್ಕಾರಿ ಕಚೇರಿಗೆ ಅಲೆಯಬೇಕಿಲ್ಲ. ಅಂದರೆ ಬ್ಯಾಂಕ್‌ಗಳಲ್ಲಿ ಸಾಲ ಪಡೆದರೆ, ತೀರಿಸಿದರೆ, ಆಸ್ತಿ ವಿಭಾಗ ಮಾಡಿದರೆ, ಅಡವು ಇಟ್ಟಿರೆ ಅಂಥಹ ಸಂದರ್ಭ ಅದರ ವಿವರಗಳನ್ನು ಪಹಣಿಯಲ್ಲಿ ದಾಖಲಿಸಲು ಕಂದಾಯಾಧಿಕಾರಿಯ ಬೆರಳಚ್ಚು ಬೇಕಿತ್ತು. ಇನ್ನು ಸ್ವಯಂ ಆಗಿ ಆ ಮಾಹಿತಿಗಳು ದಾಖಲಾಗುತ್ತವೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.