Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಅಮಿತ್ ಶಾ ಭೇಟಿಯಾದ ಮಾಜಿ ಸಿಎಂ ಕುಮಾರಸ್ವಾಮಿಗೆ ಮತ್ತೊಂದು ಆಫರ್ – ಮಂಡ್ಯ ಟಿಕೆಟ್ ಸುಮಲತಾಗೆ ಸಿಗುವ ಸೂಚನೆ

ದೆಹಲಿ : ಲೋಕಸಭೆ ಚುನಾವಣೆಗೆ ದಿನಾಂಕ ನಿಗದಿಯಾದ ಬೆನ್ನಲ್ಲೇ ಮಾಜಿ ಸಿಎಂ ಕುಮಾರಸ್ವಾಮಿ ದೆಹಲಿಯಲ್ಲಿ ಬಿಜೆಪಿ ವರಿಷ್ಠರನ್ನು‌ ಮತ್ತೊಮ್ಮೆ ಭೇಟಿ ಮಾಡಿ ಬಂದ ಸುದ್ದಿಯೊಂದು ತಡವಾಗಿ ಬೆಳಕಿಗೆ ಬಂದಿದೆ. ಏಪ್ರಿಲ್ 19 ರಿಂದ ಏಳು ಹಂತಗಳಲ್ಲಿ ದೇಶಾದ್ಯಂತ ಲೋಕಸಭೆ ಚುನಾವಣೆ ಎಂದು ದಿನಾಂಕ ಪ್ರಕಟವಾಗಿದ್ದರೆ, ಇತ್ತ ಕರ್ನಾಟಕದಲ್ಲಿ ಏಪ್ರಿಲ್ 26 ಮತ್ತು‌ ಮೇ.7 ರಂದು ಎರಡು ಹಂತಗಳಲ್ಲಿ‌ ಮತದಾನ ಫಿಕ್ಸ್ ಆಗಿದೆ. ಚುನಾವಣಾ ಆಯೋಗ ದಿನಾಂಕ ಪ್ರಕಟಿಸುವ ಒಂದು ದಿನಕ್ಕೂ ಮುನ್ನವೇ ಅಂದರೆ, ಶುಕ್ರವಾರ ಹೆಚ್.ಡಿ.ಕುಮಾರಸ್ವಾಮಿ, ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಹೊರ ಹೊಮ್ಮಿದ ಡಾ.ಸಿ.ಎನ್.ಮಂಜುನಾಥ್, ಪತ್ನಿ ಡಾ.ಅನಸೂಯಾ, ಹೆಚ್ಡಿಕೆ ಪುತ್ರ ನಿಖಿಲ್ ಕುಮಾರಸ್ವಾಮಿ ಒಟ್ಟಿಗೆ ತೆರಳಿ ದೆಹಲಿಯಲ್ಲಿ ಕೇಂದ್ರ ಗೃಹಸಚಿವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆಂದು ದೆಹಲಿ ಮೂಲಗಳು ತಿಳಿಸಿವೆ. ತಮ್ಮನ್ನು ಭೇಟಿಯಾಗಲೆಂದು ಬಂದ ಜೆಡಿಎಸ್ ನಾಯಕರನ್ನು‌ ಮತ್ತು ಮಾಜಿ ಪ್ರಧಾನಿ ದೇವೇಗೌಡರ ಮಗಳು ಹಾಗೂ ಅಳಿಯರನ್ನು ಆತ್ಮೀಯವಾಗಿ ಬರಮಾಡಿಕೊಂಡ ಅಮಿತ್ ಶಾ, ಚುನಾವಣೆ ಗೆಲ್ಲಲು ಕೆಲ ಟಿಪ್ಸ್‌ಗಳನ್ನು ನೀಡಿದರೆಂದು ಹೇಳಲಾಗುತ್ತದೆ. ಅಲ್ಲದೇ, ಚುನಾವಣೆ ಸಂದರ್ಭದಲ್ಲಿ ತಾವು ರಾಜ್ಯಕ್ಕೆ ಬಂದು ಡಾ.ಮಂಜುನಾಥ್ ಪರ ಕ್ಯಾಂಪೇನ್ ನಡೆಸಬೇಕೆಂಬ ಮನವಿಗೂ ಶಾ ಒಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನು, ಮಂಡ್ಯ ಟಿಕೆಟ್ ವಿಚಾರವಾಗಿಯೂ ಮಾತುಕತೆ ನಡೆಸಲಾಗಿದ್ದು, ಇಷ್ಟರಲ್ಲೇ ಯಾರಿಗೆ ಟಿಕೆಟ್ ನೀಡಿದರೆ ಸೂಕ್ತ ಎಂಬುದನ್ನು ಅಂತಿಮಗೊಳಿಸಲಾಗುವುದು. ಒಂದು ವೇಳೆ ಕುಮಾರಸ್ವಾಮಿ ಅವರೇ ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಾರೆಂದರೆ ಬಿಜೆಪಿಯಿಂದ ಚಿಕ್ಕಬಳ್ಳಾಪುರ ಕ್ಷೇತ್ರವನ್ನು ಜೆಡಿಎಸ್ ಗೆ ಬಿಟ್ಟುಕೊಡಲಾಗುವುದೆಂದು ಶಾ ಹೇಳಿದ್ದಾರೆಂದು ತಿಳಿದು ಬಂದಿದೆ. ಆದರೆ, ಕುಮಾರಸ್ವಾಮಿ ಅವರಾಗಲಿ, ಅವರ ಕುಟುಂಬದವರಾಗಲಿ ಇದಾವುದರ ಬಗ್ಗೆಯೂ ತುಟಿ ಪಿಟಕ್ ಎನ್ನದಿರುವುದು ಸೋಜಿಗ. ಅಮಿತ್ ಶಾ “ಚಿಕ್ಕಬಳ್ಳಾಪುರ” ಹೊಸ “ಆಫರ್” ಬಗ್ಗೆ ಯೋಚಿಸುವುದಾಗಿ ತಿಳಿಸಿದ ಹೆಚ್ಡಿಕೆ, ತಮಗೆ ಹೃದಯ ಸಂಬಂಧಿ ಶಸ್ತ್ರಚಿಕಿತ್ಸೆ ಇದ್ದು, ಆರೋಗ್ಯ ಸುಧಾರಣೆ ನೋಡಿಕೊಂಡು‌ ಮತ್ತು ವೈದ್ಯರ ಸಲಹೆ ಪಡೆದುಕೊಂಡು ತಾವು ಈ ಸಲದ ಚುನಾವಣೆಯಲ್ಲಿ ಸ್ಪರ್ಧಿಸಬೇಕೆ? ಬೇಡವೇ? ಎಂಬ ಬಗ್ಗೆ‌ ನಿರ್ಧರಿಸುವುದಾಗಿಯೂ ಅಮಿತ್ ಶಾ ಅವರಿಗೆ ತಿಳಿಸಿದರೆಂದು ಮೂಲಗಳು ಹೇಳುತ್ತವೆ. ಹೀಗಾಗಿ, ಒಂದು ವೇಳೆ ಕುಮಾರಸ್ವಾಮಿ ಅನಾರೋಗ್ಯದ ಕಾರಣ ಚುನಾವಣೆಯಲ್ಲಿ ಸ್ಪರ್ಧಿಸದಿದ್ದರೆ ಮಂಡ್ಯ ಟಿಕೆಟ್ ಹಾಲಿ ಸಂಸದೆ ಸುಮಲತಾಗೆ ಫಿಕ್ಸ್ ಅನ್ನೋದರಲ್ಲಿ‌ ಯಾವುದೇ ಅನುಮಾನವಿಲ್ಲ.