Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಪ್ರತಿದಿನ ಕಂಪ್ಯೂಟರ್ ಮುಂದೆ ಕುಳಿತು ಕೆಲಸ ಮಾಡ್ತೀರಾ?ಆರೋಗ್ಯಕರ ಕಣ್ಣು ಬಯಸುವವರು ಈ ಸಲಹೆಗಳನ್ನು ಪಾಲಿಸಿ

ದೇಹದ ಪ್ರಮುಖ ಅಂಗಾಂಗಗಳಲ್ಲಿ ಕಣ್ಣುಗಳು ಕೂಡಾ ಒಂದು. ಕಣ್ಣುಗಳು ಅತ್ಯಂತ ಸೂಕ್ಷ್ಮವಾಗಿದ್ದು, ಅದನ್ನು ಜೋಪಾನ ಮಾಡುವುದು ಮುಖ್ಯ. ಹೀಗಾಗಿ ಕಣ್ಣುಗಳಿಗೆ ಹೆಚ್ಚಿನ ಆರೈಕೆ ಅಗತ್ಯವಾಗಿರುತ್ತದೆ. ನಮ್ಮ ದೈನಂದಿನ ಚುಟವಟಿಕೆಗೆ ಹಾಗೂ ಎಲ್ಲಾ ರೀತಿಯ ಕೆಲಸ ಕಾರ್ಯಗಳಿಗೆ ಕಣ್ಣು ಅಗತ್ಯವಾಗಿ ಬೇಕು.ಇಂದಿನ ಕಾಲದಲ್ಲಿ ಬದಲಾಗುತ್ತಿರುವ ಜೀವನ ಶೈಲಿಯಿಂದ ಕಣ್ಣುಗಳ ಆರೋಗ್ಯ ಹಾಳಾಗುತ್ತಿರುವುದು ಯಾರೂ ಗಮನಿಸುವುದಿಲ್ಲ. ಕೆಲಸದ ಕಾರಣದಿಂದ ಹೆಚ್ಚಿನ ಜನರು ಮೊಬೈಲ್, ಲ್ಯಾಪ್ ಟಾಪ್ ನೋಡುವುದು ಹೆಚ್ಚಾಗಿದೆ. ಇಂದು ಹೆಚ್ಚಿನವರಿಗೆ ರಾತ್ರಿ ನಿದ್ದೆಗೆಟ್ಟು ಸುಮಾರು ಹೊತ್ತು ಮೊಬೈಲ್ ಬಳಸುವುದು ಹವ್ಯಾಸವಾಗಿದೆ. ಇದು ಕಣ್ಣಿನ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಕಣ್ಣಿಲ್ಲದೆ ಜೀವನ ನಡೆಸುವುದು ಸವಾಲಿನ ಕೆಲಸ. ಇರುವ ಆರೋಗ್ಯಕರ ಕಣ್ಣನ್ನು ಸರಿಯಾಗಿ ನೋಡಿಕೊಂಡಲ್ಲಿ ಸಮಸ್ಯೆ ಎದುರಾಗುವುದಿಲ್ಲ. ದೃಷ್ಟಿ ಸ್ಪಷ್ಟವಾಗಿರಬೇಕು ಹಾಗೂ ಕಣ್ಣಿಗೆ ಯಾವುದೇ ಹಾನಿಯಾಗಬಾರದೆಂದರೆ ಕೆಲವೊಂದು ನಿಯಮಗಳನ್ನು ಪಾಲಿಸಬೇಕಾಗುತ್ತದೆ. ನಮ್ಮ ಕೆಲ ಅಭ್ಯಾಸಗಳೇ ನಮ್ಮ ಕಣ್ಣಿನ ಆರೋಗ್ಯವನ್ನು ಹಾಳು ಮಾಡುತ್ತವೆ. ಅನೇಕರು ಆಗಾಗ ಕಣ್ಣುಗಳನ್ನು ಉಜ್ಜುತ್ತಿರುತ್ತಾರೆ. ಇದು ಕಣ್ಣಿಗೆ ಹಾನಿಯುಂಟು ಮಾಡುತ್ತದೆ. ಕಣ್ಣುಗಳ ಸುತ್ತ ಇರುವ ರಕ್ತನಾಳಗಳು ತುಂಬಾ ಸೂಕ್ಷ್ಮವಾಗಿರುತ್ತವೆ. ಕಣ್ಣುಗಳನ್ನು ಉಜ್ಜುವುದರಿಂದ ಇದಕ್ಕೆ ಹಾನಿಯಾಗುತ್ತದೆ. ಕಣ್ಣು ಊದಿಕೊಳ್ಳಲು ಕಾರಣವಾಗಬಹುದು. ಜೊತೆಗೆ ಕಣ್ಣಿನ ಸುತ್ತ ಕಪ್ಪು ಕಲೆ ಕಾಣಿಸಬಹುದು. ಹಾಗಾಗಿ ಈ ಅಭ್ಯಾಸವನ್ನು ಬಿಟ್ಟುಬಿಡಿ. ಸಾಮಾನ್ಯವಾಗಿ ಜನರು ಬಿಸಿಲಿನಲ್ಲಿ ಸನ್ ಗ್ಲಾಸ್ ಧರಿಸುವವರನ್ನು ಸ್ಟೈಲ್ ಎಂದುಕೊಂಡಿದ್ದಾರೆ. ಗ್ಲಾಸ್ ಧರಿಸದಿರುವುದು ಸರಳ ಜೀವನದ ಸಂಕೇತ ಎಂದುಕೊಂಡಿದ್ದಾರೆ. ಇದು ತಪ್ಪು. ಕಣ್ಣಿನ ರಕ್ಷಣೆಗೆ ಸನ್ ಗ್ಲಾಸ್ ಧರಿಸುವುದು ಒಳ್ಳೆಯದು. ಸೂರ್ಯನ ಹಾನಿಕಾರಕ ಕಿರಣಗಳು ಕಣ್ಣು ಮತ್ತು ಕಣ್ಣುರೆಪ್ಪೆ ಎರಡನ್ನೂ ಹಾನಿ ಮಾಡುತ್ತವೆ. ಕಣ್ಣುಗಳನ್ನು ಆರೋಗ್ಯವಾಗಿಡಲು ವಿವಿಧ ವಿಟಮಿನ್ ಗಳು, ಖನಿಜಗಳು, ಕೊಬ್ಬಿನಾಮ್ಲಗಳು ಇತ್ಯಾದಿಗಳು ಬೇಕಾಗುತ್ತವೆ. ಹಣ್ಣುಗಳು, ಹಸಿರು ಎಲೆಗಳ ತರಕಾರಿಗಳು, ಮೀನು ಇತ್ಯಾದಿಗಳನ್ನು ಸೇವಿಸಬೇಕು. ಕಣ್ಣಿನ ರಕ್ಷಣೆಗೆ ನಿದ್ರೆ ಅಗತ್ಯ. ಕಣ್ಣಿನ ಸ್ನಾಯುಗಳಿಗೆ ವಿಶ್ರಾಂತಿ ಅಗತ್ಯವಿರುತ್ತದೆ. ಆರಾಮದಾಯಕ ನಿದ್ರೆ ಕಣ್ಣಿನ ಮೇಲಿನ ಒತ್ತಡವನ್ನು ಕಡಿಮೆ ಮಾಡುತ್ತದೆ. ನಿದ್ರೆ ಸರಿಯಾಗಿ ಆಗದೆ ಹೋದಲ್ಲಿ, ಕಪ್ಪು ಕಲೆ, ಕೆಂಪು ಕಣ್ಣು, ಕಣ್ಣಿನಶುಷ್ಕತೆ ಸಮಸ್ಯೆ ಕಾಡುತ್ತದೆ.ಕಡಿಮೆ ನೀರು ಕುಡಿಯುವುದು ಕೂಡ ಕಣ್ಣಿನ ಸಮಸ್ಯೆಗೆ ಕಾರಣವಾಗುತ್ತದೆ. ಹಾಗಾಗಿ ದಿನಕ್ಕೆ ಅಗತ್ಯವಾಗಿ 3-4 ಲೀಟ‌ರ್ ನೀರಿನ ಸೇವನೆ ಮಾಡಬೇಕು. ಹುಬ್ಬಿಗೆ ಹರಳೆಣ್ಣೆಯಿಂದ ಮಸಾಜ್ ಮಾಡಿಕೊಂಡರೆ ಒತ್ತಡ ನಿವಾರಣೆಯಾಗುತ್ತದೆ. ಅದರ ಜೊತೆಗೆ ಕಣ್ಣಿಗೂ ತಂಪು ಅನುಭವ ನೀಡುತ್ತದೆ ಕಣ್ಣನ್ನು ಆಗಾಗ ತಣ್ಣೀರಿನಲ್ಲಿ ತೊಳೆದುಕೊಳ್ಳುತ್ತಿರಬೇಕು. ಎರಡೂ ಅಂಗೈಗಳನ್ನು ಒಂದಕ್ಕೊಂದು ಉಜ್ಜಿ ಅದರಿಂದ ಬರುವ ಶಾಖವನ್ನು ಕಣ್ಣುಗಳ ಮೇಲಿಡಬೇಕು. ಹೀಗೆ ಮಾಡಿದರೆ ಕಣ್ಣುಗಳ ಆಯಾಸವನ್ನು ಕಡಿಮೆ ಮಾಡಿ, ದೃಷ್ಟಿಯನ್ನು ಉತ್ತಮಗೊಳಿಸಲು ಸಹಾಯ ಮಾಡುತ್ತದೆ. ದಿನನಿತ್ಯ ಕಂಪ್ಯೂಟ‌ರ್ ಮುಂದೆ ಕೂತು ಕೆಲಸ ಮಾಡುವುದು ಕಣ್ಣಿಗೆ ಆಯಾಸವಾಗುತ್ತದೆ. ಆದ್ದರಿಂದ ಕಣ್ಣುಗಳನ್ನು ಆಗಾಗ ಕೆಲವು ಸೆಕೆಂಡ್‌ಗಳ ಕಾಲ ನಿರಂತರವಾಗಿ ಮಿಟುಕಿಸುತ್ತಿರಬೇಕು. ಇದು ಆಯಾಸ ತೊಲಗಿಸಲು ನೆರವಾಗುತ್ತದೆ. ಸಮಯ ಸಿಕ್ಕಾಗಲೆಲ್ಲಾ ಕಣ್ಣಿನ ಗುಡ್ಡೆಯನ್ನು ಮೇಲಿಂದ, ಕೆಳಕ್ಕೆ, ಎಡದಿಂದ-ಬಲಕ್ಕೆ ಚಲಿಸುತ್ತಿರಬೇಕು. ಲೋಳೆಸರ, ಮತ್ತಿಸೊಪ್ಪು ಅಥವಾ ದಾಸವಾಳದ ಸೊಪ್ಪಿನ ರಸವನ್ನು ತಲೆಗೆ ಹಚ್ಚಿ ಸ್ನಾನ ಮಾಡಿದರೆ ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದು. ಕಣ್ಣಿಗೆ ಕಾಡಿಗೆ ಹಚ್ಚವವರು ಆದಷ್ಟು ಮನೆಯಲ್ಲಿಯೇ ತಯಾರಿಸಲು ಪ್ರಯತ್ನಿಸಿ. ಕಾಡಿಗೆ ತಯಾರಿಸುವಾಗ ರಾಸಾಯನಿಕ ವಸ್ತುಗಳು ಬಳಸುವುದರಿಂದ ಕೆಲವರಲ್ಲಿ ತುರಿಕೆಯಂಥ ಸಮಸ್ಯೆ ಕಾಡುತ್ತದೆ. ಕೆಲ ಯೋಗಾಸನ ಅಭ್ಯಾಸ ಮಾಡುವುದರಿಂದಲೂ ಕಣ್ಣಿನಲ್ಲಿರುವ ನರಗಳು ಬಲಗೊಳ್ಳುತ್ತವೆ. ಪಾದ ಹಸ್ತಾಸನ, ಪ್ರಸಾರಿತ ಪಾದೋತ್ಥಾನಾಸನ, ಶಶಾಂಕಾಸನ, ಉಷ್ಟ್ರಾಸನ, ಸರ್ವಾಂಗಾಸನ, ಶವಾಸನ ಮತ್ತು ಮುದ್ರೆಗಳಿಂದಲೂ ಕಣ್ಣುಗಳ ಆರೋಗ್ಯ ಕಾಪಾಡಿಕೊಳ್ಳಬಹುದು.ಇಂದಿನ ಮೊಬೈಲ್, ಕಂಪ್ಯೂಟರ್ ಹಾಗೂ ಇತರ ಗ್ಯಾಜೆಟ್ ಬಳಕೆಯಿಂದ ಕಣ್ಣುಗಳ ಆರೋಗ್ಯ ಹಾಳಾಗುವುದು ಬೇಗ. ಆದ ಕಾರಣ ವರ್ಷಕ್ಕೊಮ್ಮೆಯಾದರೂ ನೇತ್ರತಜ್ಞರ ಬಳಿ ಪರೀಕ್ಷಿಸಿಕೊಳ್ಳಬೇಕು.