Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ವಾಷಿಂಗ್‌ ಮಷಿನ್‌ನಲ್ಲಿತ್ತು 2.54 ಕೋಟಿ ಹಣ: ಪರಿಶೀಲನೆ ವೇಳೆ ಇ.ಡಿ ಶಾಕ್‌!

ನವದೆಹಲಿ: ವಾಷಿಂಗ್‌ ಮಷಿನ್‌ನಲ್ಲಿ ಬಚ್ಚಿಟ್ಟಿದ್ದ 2.54 ಕೋಟಿ ರೂ. ಕಂತೆ ಕಂತೆ ನೋಟುಗಳನ್ನು ಜಾರಿ ನಿರ್ದೇಶನಾಲಯ (ED) ಅಧಿಕಾರಿಗಳು ಪತ್ತೆ ಹಚ್ಚಿ ವಶಕ್ಕೆ ಪಡೆದಿದ್ದಾರೆ.

ವಿದೇಶಿ ವಿನಿಮಯ ಕಾನೂನು ಉಲ್ಲಂಘಿಸಿದ ಆರೋಪದಡಿಯಲ್ಲಿ ಹಲವೆಡೆ ಇ.ಡಿ ಅಧಿಕಾರಿಗಳು ಶೋಧ ಕಾರ್ಯ ನಡೆಸಿದ್ದಾರೆ. ಕಳೆದ ಕೆಲವು ದಿನಗಳಿಂದ ದೆಹಲಿ, ಹೈದರಾಬಾದ್, ಮುಂಬೈ, ಕೋಲ್ಕತ್ತಾ ಮತ್ತು ಹರಿಯಾಣದ ಕುರುಕ್ಷೇತ್ರದ ವಿವಿಧ ಸ್ಥಳಗಳಲ್ಲಿ ಶೋಧ ಕಾರ್ಯ ನಡೆಯುತ್ತಿದೆ.
ವಿವಿಧ ಕಂಪನಿಗಳ ಕಚೇರಿ ಮತ್ತು ಅವುಗಳ ನಿರ್ದೇಶಕರ ಮನೆಗಳ ಮೇಲೆ ಶೋಧ ನಡೆಸಲಾಯಿತು. ಕಂಪನಿಗಳ ಪಾಲುದಾರರಾದ ವಿಜಯ್ ಕುಮಾರ್ ಶುಕ್ಲಾ, ಸಂಜಯ್ ಗೋಸ್ವಾಮಿ, ಸಂದೀಪ್ ಗಾರ್ಗ್ ಮತ್ತು ವಿನೋದ್ ಕೇಡಿಯಾ ಸೇರಿದಂತೆ ಇತರರನ್ನೂ ಸಹ ತನಿಖೆಗೆ ಒಳಪಡಿಸಲಾಗಿದೆ.

ಸಿಂಗಾಪುರದ ಗ್ಯಾಲಕ್ಸಿ ಶಿಪ್ಪಿಂಗ್ ಮತ್ತು ಲಾಜಿಸ್ಟಿಕ್ಸ್, ಹಾರಿಜಾನ್ ಶಿಪ್ಪಿಂಗ್ ಮತ್ತು ಲಾಜಿಸ್ಟಿಕ್ಸ್‌ಗೆ 1,800 ಕೋಟಿ ರೂ. ಮೊತ್ತದ ಸಂಶಯಾಸ್ಪದ ಬಾಹ್ಯ ಹಣ ರವಾನೆ ಮಾಡಲಾಗಿದೆ ಎಂದು ಕೆಲ ಕಂಪನಿಗಳ ಮೇಲೆ ಆರೋಪ ಕೇಳಿಬಂದಿತ್ತು. ನಿಖರ ಮಾಹಿತಿ ಆಧರಿಸಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಈ ಸಾಗರೋತ್ತರ ವಿನಿಮಯ ಘಟಕಗಳನ್ನು ಆಂಥೋನಿ ಡಿ ಸಿಲ್ವಾ ಎಂಬ ವ್ಯಕ್ತಿ ನಿರ್ವಹಿಸುತ್ತಾರೆ. ಕಾಪ್ರಿಕಾರ್ನಿಯನ್ ಶಿಪ್ಪಿಂಗ್ ಮತ್ತು ಲಾಜಿಸ್ಟಿಕ್ಸ್, ಲಕ್ಷ್ಮಿಟನ್ ಮ್ಯಾರಿಟೈಮ್ ಮತ್ತು ಅವರ ಸಹವರ್ತಿಗಳು ಬೋಗಸ್ ಸರಕು ಸೇವೆಗಳು ಮತ್ತು ಆಮದುಗಳ ನೆಪದಲ್ಲಿ ಸಿಂಗಾಪುರ ಮೂಲದ ಘಟಕಗಳಿಗೆ 1,800 ಕೋಟಿಗಳಷ್ಟು ಬಾಹ್ಯ ಹಣ ರವಾನೆ ಮಾಡಿದ್ದಾರೆ.
ಶೋಧದ ವೇಳೆ ವಾಷಿಂಗ್ ಮಷಿನ್‌ನಲ್ಲಿ ಬಚ್ಚಿಟ್ಟಿದ್ದ 2.54 ಕೋಟಿ ರೂ. ಮೌಲ್ಯದ ಅಪರಿಚಿತ ನಗದು ಪತ್ತೆಯಾಗಿದ್ದು, ವಶಕ್ಕೆ ಪಡೆಯಲಾಗಿದೆ. ದಾಳಿಯ ಸಮಯದಲ್ಲಿ ಆರೋಪಿಗಳ ದಾಖಲೆಗಳು ಮತ್ತು ಡಿಜಿಟಲ್ ಸಾಧನಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ.