Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಶಾಸಕ ಚಂದ್ರಪ್ಪ ಅವರನ್ನು ಅಮಾನುಗೊಳಿಸಿ: ಬಿಜೆಪಿ ಮಾಧ್ಯಮ ವಕ್ತಾರ ತಿಪ್ಪೇಸ್ವಾಮಿ ಛಲವಾದಿ ಒತ್ತಾಯ.!

ಚಿತ್ರದುರ್ಗ: ಯಾವುದೇ ಅರ್ಹತೆ ಇಲ್ಲದಿದ್ದರೂ ಬಿ.ಎಸ್.ಯಡಿಯೂರಪ್ಪ ನಾಯಕತ್ವದಲ್ಲಿ ಗೆಲುವು ಸಾಧಿಸಿರುವುದನ್ನು ಮರೆತು ಪಕ್ಷದ ನಾಯಕರ ವಿರುದ್ಧವೇ ಮಾತನಾಡುತ್ತಿರುವ ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ ಅವರನ್ನು ಪಕ್ಷದಿಂದ ಅಮಾನತ್ತುಗೊಳಿಸಬೇಕು. ಅವರ ಪುತ್ರ ಎಂ.ಸಿ.ರಘುಚಂದನ್ ಅವರನ್ನು ಉಚ್ಛಾಟನೆ ಮಾಡಬೇಕು ಜಿಲ್ಲಾ ಬಿಜೆಪಿ ಮಾಧ್ಯಮ ವಕ್ತಾರ ತಿಪ್ಪೇಸ್ವಾಮಿ ಛಲವಾದಿ ಒತ್ತಾಯಿಸಿದ್ದಾರೆ.

ಈ ಕುರಿತು ಶನಿವಾರ ಹೇಳಿಕೆ ನೀಡಿರುವ ಅವರು, ಭಾರತೀಯ ಜನತಾ ಪಕ್ಷ ನಿಷ್ಠೆ, ಪ್ರಾಮಾಣಿಕತೆಗೆ ಹೆಸರುವಾಗಿದೆ. ಆದರೆ ಪಕ್ಷಕ್ಕೆ ಹಾನಿ ಆಗುವ ರೀತಿ ಹೇಳಿಕೆ ನೀಡುತ್ತಿರುವ ಚಂದ್ರಪ್ಪ ಹಾಗೂ ಪುತ್ರ ಎಂ.ಸಿ.ರಘುಚಂದನ್ ಅವರ ದುರಾಹಂಕರಾದ ಮಾತುಗಳು ಕಾರ್ಯಕರ್ತರಿಗೆ ನೋವು ತರಿಸುತ್ತಿವೆ ಎಂದಿದ್ದಾರೆ.

ಕ್ಷೇತ್ರದಲ್ಲಿ ಕೆರೆ ಹೂಳೆತ್ತುವುದು, ರಸ್ತೆ ಅಭಿವೃದ್ಧಿ ಹೆಸರಲ್ಲಿ ಚಂದ್ರಪ್ಪ ನಡೆಸಿದ ಕೋಟ್ಯಾಂತರ ರೂಪಾಯಿ ಭ್ರಷ್ಟಾಚಾರ ಹಾಗೂ ಜನರೊಂದಿಗೆ ಅಸಭ್ಯ ವರ್ತನೆಗೆ ಕ್ಷೇತ್ರದ ಜನ ಬೇಸತ್ತಿದ್ದರು. ಪರಿಣಾಮ ಈ ಬಾರಿ ಸೋಲಿಸಲೇಬೇಕೆಂದು ಪಣ ತೊಟ್ಟಿದ್ದರು. ಆದರೆ ಯಡಿಯೂರಪ್ಪ ಮುಖ ನೋಡಿ ಕೊನೇ ಗಳಿಗೆಯಲ್ಲಿ ಪಕ್ಷದ ಪರ ಮತ ಚಲಾಯಿಸಿ, ಚಂದ್ರಪ್ಪ ಗೆಲುವಿಗೆ ಕ್ಷೇತ್ರದ ಜನರು ಕಾರಣಕರ್ತರಾಗಿದ್ದಾರೆ. ಆದರೆ ನನ್ನ ಪುತ್ರನ ಸಂಘಟನೆ ಹಾಗೂ ಹಣದಿಂದಲೇ ಗೆಲುವು ಸಾಧಿಸಿದ್ದೇನೆ ಎಂಬ ಅಹಂಕಾರದ ಮಾತುಗಳು ಕಾರ್ಯಕರ್ತರಿಗೆ ಅವಮಾನ ಮಾಡುವಂತದ್ದಾಗಿದೆ ಎಂದು ಹೇಳಿದ್ದಾರೆ.

ಜೊತೆಗೆ ಕ್ಷೇತ್ರದಲ್ಲಿ ಹಿರಿಯ ರಾಜಕಾರಣಿ ಆಗಿರುವ ಜಿ.ಎಚ್.ತಿಪ್ಪಾರೆಡ್ಡಿ, ಪಕ್ಷ ಸಂಘಟನೆಗೆ ಅರ್ಪಿಸಿಕೊಂಡಿರುವ ಕೆ.ಎಸ್.ನವೀನ್ ವಿರುದ್ಧ ಟೀಕೆ ಮಾಡುತ್ತಿರುವ ಚಂದ್ರಪ್ಪ ಹಾಗೂ ಪುತ್ರ ರಘುಚಂದನ್‌ಗೆ ಪಕ್ಷ ಪಾಠ ಕಲಿಸಬೇಕಿದೆ. ಕೂಡಲೇ ಪುತ್ರನನ್ನು ಉಚ್ಛಾಟಿಸಿ, ಅಪ್ಪನನ್ನು ಅಮಾನತುಗೊಳಿಸಬೇಕು. ಈ ಮೂಲಕ ಇಂತಹ ಕೆಟ್ಟ ವರ್ತನೆಗೆ ಕಡಿವಾಣ ಹಾಕಬೇಕು ಎಂದು ಮನವಿ ಮಾಡಿದ್ದಾರೆ.

ಜೊತೆಗೆ ಅಹಂಕಾರದ ಮಾತುಗಳನ್ನಾಡಿ, ಪಕ್ಷದ ಕಚೇರಿಗೆ ಕಲ್ಲುಗಳಿಂದ ಹಾನಿ ಮಾಡಿಸಿರುವ, ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ಕಾರಿಗೆ ಮುತ್ತಿಗೆ ಹಾಕಿಸಿ ದೌರ್ಜನ್ಯ ನಡೆಸಿರುವ ಚಂದ್ರಪ್ಪ ಅವರ ಜೊತೆ ಯಾವುದೇ ಸಂಧಾನ ನಡೆಸಬಾರದು. ಕೂಡಲೇ ಇವರಿಬ್ಬರ ವಿರುದ್ಧ ಪಕ್ಷದ ವರಿಷ್ಠರು ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.