Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಕೂದಲಿಗೆ ಎಣ್ಣೆ ಹಚ್ಚುವ ವಿಚಾರದಲ್ಲಿರುವ ತಪ್ಪು ಕಲ್ಪನೆಗಳಿವು

ನೆತ್ತಿಯನ್ನು ಪೋಷಿಸುವಲ್ಲಿ ಎಣ್ಣೆ ಮಸಾಜ್ ಪಾತ್ರ ಮಹತ್ವದ್ದು. ಆದರೆ ಈ ಎಣ್ಣೆ ಹಾಕುವ ವಿಷಯದಲ್ಲಿ ನಾವು ಕೆಲವೊಂದು ತಪ್ಪು ಮಾಹಿತಿಗಳನ್ನು ಹೊಂದಿದ್ದೇವೆ.

ಕೂದಲು ಆರೋಗ್ಯವಾಗಿರಬೇಕಾದರೆ ನಿಯಮಿತವಾಗಿ ಎಣ್ಣೆ ಹಾಕುವುದು ತುಂಬಾ ಮುಖ್ಯ. ನೆತ್ತಿಯನ್ನು ಪೋಷಿಸುವಲ್ಲಿ ಎಣ್ಣೆ ಮಸಾಜ್ ಪಾತ್ರ ಮಹತ್ವದ್ದು. ಆದರೆ ಈ ಎಣ್ಣೆ ಹಾಕುವ ವಿಷಯದಲ್ಲಿ ನಾವು ಕೆಲವೊಂದು ತಪ್ಪು ಮಾಹಿತಿಗಳನ್ನು ಹೊಂದಿದ್ದೇವೆ.

ಇದೀಗ ಕಾಲ ಬದಲಾಗಿದ್ದು, ಹವಾಮಾನ ಪರಿಸರಕ್ಕೆ ನಾವು ಬದಲಾಗಬೇಕು. ನಮ್ಮ ಹಿಂದಿನವರು ಹೇಳಿಕೊಟ್ಟ ಮಾತನ್ನೇ ನಿಜವೆಂದುಕೊಂಡು, ಅದನ್ನೇ ಪಾಲಿಸುವವರು ಇದ್ದಾರೆ. ಇದರಿಂದ ಕೂದಲಿನ ಆರೋಗ್ಯ ಮತ್ತಷ್ಟು ಹದಗೆಡಬಹುದು.

ಕೂದಲಿಗೆ ಎಣ್ಣೆ ಹಾಕುವ ವಿಚಾರದಲ್ಲಿ ಇರುವ ತಪ್ಪುಮಾಹಿತಿಗಳನ್ನು ಈ ಕೆಳಗೆ ನೀಡಲಾಗಿದೆ:

1. ಎಣ್ಣೆಯನ್ನು ರಾತ್ರಿಯಿಡೀ ಬಿಡುವುದು:

ಇದನ್ನು ನಮ್ಮ ಶಾಲಾ ದಿನಗಳಿಂದ ಮಾಡಿಕೊಂಡು, ಕೇಳಿಕೊಂಡು ಬಂದಿದ್ದೇವೆ. ನೆತ್ತಿ ಎಣ್ಣೆಯನ್ನು ಸರಿಯಾಗಿ ಹೀರಿಕೊಳ್ಳಲು ರಾತ್ರಿಯಿಡೀ ಬಿಡಬೇಕು ಎಂದು ನಮ್ಮ ಅಜ್ಜಿಯಂದಿರು ಹೇಳುವುದನ್ನು ಕೇಳಿರ್ತಿರಾ. ಹಾಗೇ ತಲೆಗೆ ಎಣ್ಣೆ ಹಚ್ಚಿ, ನಿದ್ದೆ ಮಾಡುವುದರಿಂದ ಎಂತಹ ಸಮಸ್ಯೆಗಳು ಉಂಟಾಗುತ್ತವೆ ಗೊತ್ತಾ?, ಹೌದು, ನಿಮ್ಮ ಕೂದಲಲ್ಲಿ ಹೆಚ್ಚು ಹೊತ್ತು ಎಣ್ಣೆ ಬಿಟ್ಟರೆ, ನಿಮ್ಮ ನೆತ್ತಿಯು ನೈಸರ್ಗಿಕ ಎಣ್ಣೆಗಳೊಂದಿಗೆ ಸೇರಿಕೊಳ್ಳುವ ಕೊಳೆಯನ್ನು ಸಂಗ್ರಹಿಸುತ್ತದೆ. ಇದು ಮುಂದೆ ಹೊಟ್ಟಿನ ಸಮಸ್ಯೆಗೆ ಕಾರಣವಾಗುತ್ತದೆ.

2. ಎಣ್ಣೆ ಹಾಕಿದ ನಂತರ ಬಿಗಿಯಾಗಿ ಕಟ್ಟುವುದು:

ಕೂದಲು ಹಾಕಿದ ನಂತರ ಗಟ್ಟಿಯಾಗಿ ಬಾಚುವುದು ನೀವು ಮಾಡುವ ಮೊದಲ ತಪ್ಪು. ಇದು ಕೂದಲು ಗಂಟಿಗೆ ಕಾರಣವಾಗುತ್ತದೆ. ನಂತರ ಅದನ್ನು ಚೆನ್ನಾಗಿ ಬಾಚಿ, ಕೂದಲು ಕಟ್ಟಿಕೊಳ್ಳುವುದು ಸಹ ನೀವು ಮಾಡುವ ತಪ್ಪಾಗಿದೆ. ಎಣ್ಣೆ ಹಾಕಿ, ಕೂದಲನ್ನು ಗಟ್ಟಿಯಾಗಿ ಕಟ್ಟಿಕೊಳ್ಳುವುದರಿಂದ ಕೂದಲು ಉದ್ದ ಬೆಳೆಯುತ್ತದೆ ಎಂಬ ಕುರುಡು ನಂಬಿಕೆಯಿದೆ. ನಿಮ್ಮ ಕೂದಲು ಚೆನ್ನಾಗಿ ಬೆಳೆಯಬೇಕಾದರೆ, ಎಣ್ಣೆ ಹಾಕುವ ಮೊದಲು ಕೂದಲನ್ನು ಚೆನ್ನಾಗಿ ಬಾಚಿಕೊಳ್ಳಿ, ತದನಂತರ ಎಣ್ಣೆ ಹಾಕಿ, ಆಗ ಎಣ್ಣೆ ಕೂದಲಿನ ಬುಡಕ್ಕೆ ಸೇರುತ್ತದೆ.

3. ಒದ್ದೆ ಕೂದಲಿಗೆ ಎಣ್ಣೆ ಹಚ್ಚುವುದು:

ತಲೆಗೆ ಎಷ್ಟೇ ತೃಪ್ತಿಕರವಾಗಿದ್ದರೂ ಬಿಸಿ ಎಣ್ಣೆಯನ್ನು ಒದ್ದೆ ಕೂದಲಿಗೆ ಮಸಾಜ್ ಮಾಡಬೇಡಿ!. ಇದೇ ಕಾರಣಕ್ಕಾಗಿ ಕೆಲವರು ಕೂದಲನ್ನು ಸ್ವಲ್ಪ ಒದ್ದೆ ಮಾಡಿಕೊಂಡು ಅಥವಾ ಈಗಾಗಲೇ ಒದ್ದೆಯಾಗಿರುವ ಕೂದಲಿಗೆ ಎಣ್ಣೆ ಹಚ್ಚುವುದು. ಹೀಗೆ ಮಾಡುವುದರಿಂದ ಒದ್ದೆಯಾದ ಕೂದಲು ಒಡೆಯಲು ಪ್ರಾರಂಭವಾಗುತ್ತದೆ. ಒದ್ದೆ ಕೂದಲಿಗೆ ಎಣ್ಣೆ ಹಾಕುವಾಗ ಕೂದಲನ್ನು ಹೆಚ್ಚು ಎಳೆಯುವ ಕಾರಣ, ಅದು ಅಗಾಧ ಪ್ರಮಾಣದ ಕೂದಲು ಉದುರುವಿಕೆಗೆ ಕಾರಣವಾಗಬಹುದು. ಆದ್ದರಿಂದ, ನಿಮ್ಮ ಕೂದಲು ಸಂಪೂರ್ಣವಾಗಿ ಒಣಗಿದಾಗ ಮಾತ್ರ ಎಣ್ಣೆ ಹಾಕಿಕೊಳ್ಳಿ.

4. ಕಡಿಮೆ ಕೂದಲಿದ್ದರೂ ಹೆಚ್ಚು ಎಣ್ಣೆ ಬಳಸುವುದು:

ಕೆಲವರು ಕೂದಲು ಬರಬೇಕು ಎಂಬ ಉದ್ದೇಶದಿಂದ ಹೆಚ್ಚೆಚ್ಚು ಎಣ್ಣೆ ಹಾಕಿ ಮಸಾಜ್ ಮಾಡುತ್ತಾರೆ. ಇದು ತಪ್ಪು, ಹೆಚ್ಚು ಎಣ್ಣೆ ಹಾಕುವುದರಿಂದ ಕೂದಲು ಉದ್ದ ಬೆಳೆಯುವುದಿಲ್ಲ. ಹೆಚ್ಚು ಎಣ್ಣೆ ಎಂದರೆ ಹೆಚ್ಚು ಶಾಂಪೂ ಬಳಕೆ ಮಾಡಬೇಕು. ಇದರಿಂದ ನಿಮ್ಮ ಕೂದಲಿನ ನೈಸರ್ಗಿಕ ಎಣ್ಣೆ ಕಡಿಮೆಯಾಗುತ್ತದೆ. ಇದು ಅಂತಿಮವಾಗಿ ನಿಮ್ಮ ಕೂದಲನ್ನು ಮೊದಲಿಗಿಂತಲೂ ಹೆಚ್ಚು ಒಣಗಿಸಿ, ಉದುರುವಿಕೆಗೆ ಕಾರಣವಾಗುತ್ತದೆ.