Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

‘ಅಡ್ಡದಾರಿ ಮೂಲಕ ಹಣ ಸಂಗ್ರಹ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು -ಸುರೇಶ್ ಕುಮಾರ್

ಬೆಂಗಳೂರು:ಬಿಡಿಎ ಮೂಲಕ ಚುನಾವಣೆಗೆ ಅಡ್ಡದಾರಿಯಿಂದ ಹಣ ಸಂಗ್ರಹಿಸುವ ಶಂಕೆಯಿದ್ದು, ಇದರ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ಕೊಡಲಾಗಿದೆ ಎಂದು ಶಾಸಕ ಎಸ್. ಸುರೇಶ್ ಕುಮಾರ್ ಅವರು ತಿಳಿಸಿದರು.

ಬಿಜೆಪಿ ಚುನಾವಣಾ ಮಾಧ್ಯಮ ಕೇಂದ್ರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿ ಇರುವ ಸಮಯದಲ್ಲಿ ಬಿಡಿಎ, ಶಿವರಾಮ ಕಾರಂತ ಬಡಾವಣೆಯಲ್ಲಿನ ಗುತ್ತಿಗೆದಾರರ ಪಾವತಿಗಾಗಿ 1 ಸಾವಿರ ಕೋಟಿಯಿಂದ 2 ಸಾವಿರ ಕೋಟಿ ಬೇಕಿದ್ದು, ಅದಕ್ಕಾಗಿ ನಾಡಪ್ರಭು ಕೆಂಪೇಗೌಡ ಬಡಾವಣೆಯ ಮೂಲ ನಿವೇಶನಗಳನ್ನು ಬ್ಯಾಂಕಿಗೆ ಅಡಮಾನ ಇಟ್ಟು ಹಣ ಪಡೆಯಲು ಹೊರಟಿದ್ದಾರೆ. ನೀತಿ ಸಂಹಿತೆ ಇರುವಾಗ ಇಷ್ಟೊಂದು ಭಾರಿ ಮೊತ್ತ ಪಡೆಯುವುದು ಅನುಮಾನಕ್ಕೆ ಆಸ್ಪದವಾಗಿದೆ. ಗುತ್ತಿಗೆದಾರರಿಗೆ ಈಗಲೇ ಹಣ ಕೊಡಬೇಕೇ? ಅದರ ಹಿಂದೆ ಏನಿದೆ ಎಂದು ಪ್ರಶ್ನಿಸಿದರು.

ರಾಜ್ಯದ ಆಡಳಿತರೂಢ ಕಾಂಗ್ರೆಸ್ ಪಕ್ಷವು ಮೂಲಸೌಕರ್ಯ ಕಾಮಗಾರಿಗಳನ್ನು ಮುಂದುವರೆಸಲು ಗುತ್ತಿಗೆದಾರರಿಗೆ ಪಾವತಿ ನೆಪ ಒಡ್ಡಿ, ಚುನಾವಣಾ ಕಾರ್ಯಕ್ಕೆ ಬಳಸಿಕೊಳ್ಳಲು ಅಡ್ಡದಾರಿಗಳಿಂದ ಹಣದ ವ್ಯವಸ್ಥೆ ಮಾಡಿಕೊಳ್ಳುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಲೋಕಸಭಾ ಚುನಾವಣೆ ಮುಗಿಯುವವರೆಗೆ ಬಿಡಿಎದಿಂದ ಯಾವುದೇ ರೀತಿಯ ಪಾವತಿಗಳು ಆಗದಂತೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಿದ್ದೇವೆ ಎಂದು ವಿವರಿಸಿದರು. ನೀತಿಸಂಹಿತೆ ಮುಗಿಯುವವರೆಗೆ ಇಂಥ ದುಸ್ಸಾಹಸಕ್ಕೆ ಅವಕಾಶ ಕೊಡಬಾರದೆಂದು ಕೋರಿದ್ದೇವೆ ಎಂದರು.

ನಿನ್ನೆ ಬಿಜೆಪಿ ಸಂಸ್ಥಾಪನಾ ದಿನವನ್ನು ಆಚರಿಸಲಾಗಿದೆ. 1980ರ ಏಪ್ರಿಲ್ 6ರಂದು ನಮ್ಮ ಪಕ್ಷವನ್ನು ಸ್ಥಾಪಿಸಲಾಗಿತ್ತು. ಇದರ ಅಂಗವಾಗಿ ರಾಜ್ಯದೆಲ್ಲೆಡೆ ಎಲ್ಲ ಕಾರ್ಯಕರ್ತರ ಮನೆಗಳ ಮೇಲೆ ಅದರಲ್ಲೂ ವಿಶೇಷವಾಗಿ ಎಲ್ಲ ಬೂತ್ ಅಧ್ಯಕ್ಷರ ಮನೆ ಮೇಲೆ ಬಿಜೆಪಿ ಧ್ವಜ ಹಾರಿಸಿದ್ದೇವೆ ಎಂದು ತಿಳಿಸಿದರು.

ತನಗೆ ಯಾವ ಪಕ್ಷದ ಮೇಲೆ ಗೌರವ, ವಿಶ್ವಾಸ ಇದೆಯೋ ಅಂಥವರು ತಮ್ಮ ಮನೆಯ ಮೇಲೆ ಧ್ವಜ ಹಾಕಲು ಮುಕ್ತ ಅನುಮತಿ ಇದೆ ಎಂದು ಚುನಾವಣಾ ಆಯೋಗವೇ ತಿಳಿಸಿದೆ. ನೀತಿ ಸಂಹಿತೆಗೆ ಅದಕ್ಕೂ ಸಂಬಂಧ ಇಲ್ಲ ಎಂದು ತಿಳಿಸಲಾಗಿದೆ. ಅದೇರೀತಿ ತಮ್ಮ ವಾಹನಗಳ ಮೇಲೆ ಧ್ವಜ ಹಾಕಲು ನಿಯಮ ಇದೆ ಎಂದು ವಿವರಿಸಿದರು.
ಏ. 26ರಂದು ನಡೆಯುವ ಚುನಾವಣೆಗೆ ಸಂಬಂಧಿಸಿದ ಮೊದಲನೇ ಹಂತದಲ್ಲಿ ನಾಮಪತ್ರ ಸಲ್ಲಿಸಿದ ಅಭ್ಯರ್ಥಿಗಳ ಕಡೆಯಿಂದ ಪ್ರತಿ ಅಭ್ಯರ್ಥಿಯ ಒಟ್ಟು ಕ್ರಿಮಿನಲ್ ಕೇಸ್ ಎಂಬ ಮಾಹಿತಿ ಇದೆ. ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ಸಿನ ಅಭ್ಯರ್ಥಿಗಳ ವಿರುದ್ಧ 18, ಬಿಜೆಪಿ ವಿರುದ್ಧ 10 ಮತ್ತು ಜೆಡಿಎಸ್ ವಿರುದ್ಧ 5 ಕೇಸುಗಳಿವೆ ಎಂದು ವಿವರಿಸಿದರು.

ಬೆಂಗಳೂರಿಗೆ ನೀರಿನ ಸಮಸ್ಯೆ ಆಗುವ ಮುನ್ಸೂಚನೆ ಇದ್ದರೂ ಇಂಡಿ ಒಕ್ಕೂಟದ ಪಕ್ಷ ಎಂಬ ಕಾರಣಕ್ಕೆ ತಮಿಳುನಾಡಿಗೆ ಕಾವೇರಿ ನೀರು ಬಿಟ್ಟಿದ್ದಾರೆ. ಈಗ ಕಾವೇರಿ 5ನೇ ಹಂತದ ಯೋಜನೆ ಜಾರಿಯಲ್ಲಿದೆ. ಅದು ಕಳೆದ ವರ್ಷವೇ ಮುಗಿಯಬೇಕಿತ್ತು. ಸರಕಾರದ ಜವಾಬ್ದಾರಿಯುತ ಸಚಿವರು ಯೋಜನೆ ಪೂರ್ಣಗೊಳಿಸಲು ಕ್ರಮ ತೆಗೆದುಕೊಂಡಿಲ್ಲವೇಕೆ ಎಂದು ಅವರು ಪ್ರಶ್ನೆಯನ್ನು ಮುಂದಿಟ್ಟರು.