ಕನ್ನಡ ನಾಡಿನ ರಸಿಕರ ಹೃದಯವನ್ನು ಸೂರೆಗೊಂಡ ನಾಯಕಿ ಅಂತ ಹಾಡಿನ ಸಾಲು ಬಂದೊಡನೆ ಬರುವ ಉತ್ತರ ರಂಗನಾಯಕಿ. ಹೌದು ಇಂತಹುದೊಂದು ಮನೋಜ್ಞ ಪಾತ್ರದಲ್ಲಿ ನಟಿಸಿ, ಜೀವಿಸಿ ಕನ್ನಡ ಚಿತ್ರ ರಸಿಕರ ಮನಸ್ಸಿನಲ್ಲಿ ಸದಾ ಸ್ಥಾನ ಹೊಂದಿರುವ ಪ್ರತಿಭಾವಂತ ನಟಿ ಎಂದರೆ ಅವರು  ಆರತಿ. ಕನ್ನಡ ಚಿತ್ರರಂಗದ ಅನಭಿಷಕ್ತ ರಾಣಿಯೇ ಆಗಿದ್ದ ನಟಿ ಆರತಿ, ಅವರ ನಟನೆ, ನೃತ್ಯ, ಧ್ವನಿ, ಹಾವ ಭಾವ ಎಲ್ಲವೂ ಅವರ ಚಿತ್ರಗಳನ್ನು ನೋಡಿದ ಎಲ್ಲರಿಗೂ ಇಂದಿಗೂ ಮನಸ್ಸಿನಲ್ಲಿ ಅಚ್ಚಳಿಯದಂತೆ ಉಳಿದಿದೆ. ಹೀಗೆ ಸಿನಿಮಾ ರಂಗದಲ್ಲಿ ಉತ್ತುಂಗದ ಸ್ಥಾನದಲ್ಲಿರುವಾಗಲೇ ಈ ನಟಿ ಇದ್ದಕ್ಕಿದ್ದಂತೆ ಸಿನಿಮಾ ರಂಗಕ್ಕೆ ವಿದಾಯ ಹೇಳಿ, ಎಲ್ಲವನ್ನೂ ತೊರೆದು ಸಿನಿಮಾ ರಂಗದಿಂದ ದೂರವಾದರು ಹಾಗೂ ಸಿನಿಮಾ ರಂಗದಿಂದ ದೂರವಾಗಿಯೇ ಉಳಿದರು. ಸರಳ ಜೀವನವನ್ನು ತಮ್ಮದಾಗಿಸಿಕೊಂಡರು.

ಆರತಿ ಅಂದಿನ ಟಾಪ್ ನಟಿ. ಆದರೆ ತಮ್ಮ ಮಗಳ ಒಂಟಿತನದ ಬೇಗೆಯನ್ನು ನಿವಾರಿಸಲು, ಮಗಳಿಗಾಗಿ ಚಿತ್ರರಂಗದಿಂದ ದೂರಾದರು. ಆದರೆ ತೆರೆ ಮರೆಯಲ್ಲಿ ಇದ್ದುಕೊಂಡು ಅವರು ಮಾಡುತ್ತಿರುವ ಸಮಾಜ ಸೇವೆ ಮಾತ್ರ ಎಂತಹವರನ್ನು ಆಶ್ಚರ್ಯದಲ್ಲಿ ಮುಳುಗಿಸುತ್ತದೆ. ತಾನು ಚಿತ್ರ ನಟಿಯಾಗಿದ್ದಾಗ ಗಳಿಸಿದ ಸಂಪತ್ತನ್ನೆಲ್ಲಾ , ಸಮಾಜ ಸೇವೆಗಾಗಿ, ಬಡವರ ಉದ್ಧಾರಕ್ಕಾಗಿ ಈ ನಟಿ ಬಳಸುತ್ತಿದ್ದಾರೆ ಎಂಬುದು ಅದೆಷ್ಟೋ ಜನಕ್ಕೆ ತಿಳಿದೇ ಇಲ್ಲ. ಮಾದ್ಯಮಗಳಿಗೂ ಕೂಡಾ ಈ ವಿಷಯ ಬಯಲಾಗಿಲ್ಲ. ಆದರೆ ಅವರ ನಿಸ್ವಾರ್ಥ ಸೇವೆಯು ಮಾತ್ರ ವಾಸ್ತವವಾಗಿದೆ.

ಅಮೆರಿಕದಲ್ಲಿ ಇದ್ದುಕೊಂಡೇ ತಮ್ಮ ಪತಿ ಚಂದ್ರಶೇಖರ ದೇಸಾಯಿ ಗೌಡರ ಜೊತೆಗೂಡಿ ತಮ್ಮ ಸಮಾಜ ಸೇವೆಯನ್ನು ವಿಸ್ತರಿಸಿಕೊಂಡೇ ಬರುತ್ತಿದ್ದಾರೆ ಆರತಿಯವರು. ಇನ್ನು ಆರತಿಯವರ ಸಮಾಜ ಸೇವೆಗೆ ಪ್ರೇರಣೆಯಾದವರು ಜಿ.ಎಸ್.ಶಿವರುದ್ರಪ್ಪ ಅವರ ಮಗ ಜಿ.ಎಸ್. ಜಯದೇವ ಅವರು ನಡೆಸುತ್ತಿರುವ ದೀನ ಬಂಧು ಎಂಬ ಮಕ್ಕಳ ಆಶ್ರಯ ಮನೆ. ಆರತಿಯವರು ಇಲ್ಲಿ ವಿದ್ಯಾರ್ಥಿಗಳಿಗೆ ವಿಶಾಲವಾದ ಹಾಸ್ಟೆಲ್ ನಿರ್ಮಾಣ ಮಾಡಿಸಿದ್ದಲ್ಲದೆ, ಸುಮಾರು ಎರಡು ಕೋಟಿ ಮೊತ್ತವನ್ನು ಠೇವಣಿಯಿರಿಸಿ ಅದರಿಂದ ಬರುವ ಬಡ್ಡಿ ಹಣವನ್ನು ವಿದ್ಯಾರ್ಥಿ ವೇತನವಾಗಿ ನೀಡಲು ವ್ಯವಸ್ಥೆ ಮಾಡಿದ್ದಾರೆ.

ಆರತಿಯವರು ತಮಗಾಗಿ ಕಟ್ಟಿಸಿಕೊಂಡಿದ್ದ ಪ್ರೀತಿಯ ಬಂಗಲೆ ಬೆಳ್ಳಿ ತೆರೆಯನ್ನು ಕೂಡಾ, 15 ಕೋಟಿ ರೂ ಗಳಿಗೆ ಮಾರಾಟ ಮಾಡಿದ ಅವರು ಬಂದ ಹಣವನ್ನು ಸಮಾಜ ಸೇವೆಗೆ ವಿನಿಯೋಗ ಮಾಡಿದರು. ಆರತಿಯವರು ಸುಮಾರು 40 ಶಾಲೆಗಳನ್ನು ದತ್ತು ಪಡೆದಿರುವುದು ಮಾತ್ರವಲ್ಲದೆ ಅಲ್ಲಿನ ಬಡ ವಿದ್ಯಾರ್ಥಿಗಳ ವೆಚ್ಚವನ್ನು ಭರಿಸುತ್ತಿರುವ ಆರತಿಯವರ ಕಳಕಳಿಯನ್ನು ಏನೆಂದು ವರ್ಣಿಸುವುದು ಎಂದೇ ತಿಳಿಯುವುದಿಲ್ಲ. ಆರತಿ ಅವರ ಸಮಾಜ ಸೇವೆ ಇಷ್ಟಕ್ಕೆ ಸೀಮಿತವಾಗಿಲ್ಲ.

ಆರತಿ ಹಾಗೂ ಅವರ ಪತಿ ಇಬ್ಬರೂ ಉತ್ತರ ಕರ್ನಾಟಕದ 20 ಹಳ್ಳಿಗಳನ್ನು ದತ್ತು ಪಡೆದಿದ್ದಾರೆ. ಹಳ್ಳಿಗಳಿಗೆ ಶೌಚಾಲಯ ವ್ಯವಸ್ಥೆ, ಶಾಲೆಗಳ ವ್ಯವಸ್ಥೆ, ಹೆಣ್ಣು ಮಕ್ಕಳಿಗಾಗಿ ಸ್ವಯಂ ಉದ್ಯೋಗ ತರಬೇತಿಗಳನ್ನು ನೀಡುವಂತಹ ಮಹತ್ವದ ಕಾರ್ಯಗಳನ್ನು ಹಮ್ಮಿಕೊಂಡಿದ್ದಾರೆ. ಚಿತ್ರರಂಗದಲ್ಲಿ ಅತ್ಯುನ್ನತ ಸ್ಥಾನದಲ್ಲಿ ಮೆರೆದ ಈ ನಟಿ, ಸಾಮಾಜಿಕ ಕಳಕಳಿಯಿಂದ ನಿಸ್ವಾರ್ಥ ಮನೋಭಾವದಿಂದ ಮಾಡುತ್ತಿರುವ ಸಮಾಜ ಸೇವೆ ಶ್ಲಾಘನೀಯ. ಯಾವುದೇ ಪ್ರಚಾರಕ್ಕೆ, ಹೆಸರಿಗಾಗಿ ಸೇವೆ ಮಾಡದೆ ನಿಸ್ವಾರ್ಥವಾಗಿ ದುಡಿಯುತ್ತಿರುವ ಆರತಿಯವರು ಬಹಳಷ್ಟು ಜನರಿಗೆ ಮಾದರಿಯಾಗಬೇಕಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here