ಏಕದಿನ ವಿಶ್ವಕಪ್‌ ತಂಡಕ್ಕೆ ಆಯ್ಕೆ ಮಾಡಿ ಎಂದು ದಕ್ಷಿಣ ಆಫ್ರಿಕಾ ಕ್ರಿಕೆಟ್‌ ಮಂಡಳಿಯನ್ನು ಒತ್ತಾಯಿಸಿಲ್ಲ, ನನ್ನ ವಿರುದ್ಧ ಕೇಳಿ ಬಂದಿರುವ ಆರೋಪಗಳೆಲ್ಲಾ ಸುಳ್ಳು ಎಂದು ಎಬಿ ಡಿವಿಲಿಯ​ರ್ಸ್ ಸ್ಪಷ್ಟಪಡಿಸಿದ್ದಾರೆ. ತಂಡದ ಆಯ್ಕೆಗೆ ಒಂದೆರಡು ದಿನಗಳು ಬಾಕಿ ಇದ್ದಾಗ, ವಿಲಿಯ​ರ್ಸ್ ನಮ್ಮನ್ನು ಸಂಪರ್ಕಿಸಿದ್ದರು ಎಂದು ದ.ಆಫ್ರಿಕಾ ಕ್ರಿಕೆಟ್‌ ಮಂಡಳಿ ವ್ಯವಸ್ಥಾಪಕ ನೀಡಿದ್ದ ಹೇಳಿಕೆಗೆ ಎಬಿಡಿ ತಡವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ‘ನಾಯಕ ಡು ಪ್ಲೆಸಿ ಜತೆ ಮೊಬೈಲ್‌ನಲ್ಲಿ ಸಂವಹನ ನಡೆಸುತ್ತಿದ್ದ ವೇಳೆ, ತಂಡಕ್ಕೆ ನನ್ನ ಸೇವೆ ಅಗತ್ಯವಿದೆ ಎನಿಸಿದರೆ ನಿವೃತ್ತಿ ಹಿಂಪಡೆದು ಆಡುವುದಾಗಿ ಹೇಳಿದ್ದೆ. ಯಾರ ಬಳಿಯೂ ಆಯ್ಕೆ ಮಾಡುವಂತೆ ಕೇಳಿಕೊಂಡಿಲ್ಲ’ ಎಂದು ವಿಲಿಯ​ರ್ಸ್ ಹೇಳಿದ್ದಾರೆ.

ನನ್ನ ಕುಟುಂಬದೊಂದಿಗೆ ಹೆಚ್ಚಿನ ಸಮಯ ಕಳೆಯಲು ಮೇ 2018ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್’ಗೆ ವಿದಾಯ ಹೇಳಿದೆ. ಆದರೆ ಕೆಲವರು ನಾನು ಹಣಕ್ಕಾಗಿ ಹೀಗೆ ಮಾಡಿದೆ ಎಂದು ಮಾತನಾಡಿದರು. ಆದರೆ ಅದು ಅವರ ತಪ್ಪು ಕಲ್ಪನೆ ಎಂದು ಹೇಳಿದ್ದಾರೆ. ನಾನು ಹಾಗೂ ಡುಪ್ಲೆಸಿಸ್ ಶಾಲಾ ದಿನಗಳಿಂದಲೂ ಒಳ್ಳೆಯ ಸ್ನೇಹಿತರು. ವಿಶ್ವಕಪ್ ಟೂರ್ನಿಗೆ ದಕ್ಷಿಣ ಆಫ್ರಿಕಾ ತಂಡವನ್ನು ಆಯ್ಕೆ ಮಾಡುವ ಮುನ್ನ ಡುಪ್ಲೆಸಿಸ್ ಜತೆ ಮಾತನಾಡಿದೆ. ನಾನು ಐಪಿಎಲ್’ನಲ್ಲಿ ಉತ್ತಮವಾಗಿ ಆಡುತ್ತಿದ್ದರಿಂದ, ಹೀಗೆ ತಂಡಕ್ಕೆ ಅಗತ್ಯವಿದ್ದರೆ, ನಾನು ದಕ್ಷಿಣ ಆಫ್ರಿಕಾ ಪರ ಆಡಲು ಸಿದ್ದ. ಆದರೆ ಅಗತ್ಯವಿದ್ದರೆ ಮಾತ್ರ ಎಂದು ಸ್ಪಷ್ಟವಾಗಿ ಹೇಳಿದ್ದೆ ಎಂದಿದ್ದಾರೆ.

ಈ ಕುರಿತಾಗಿ ನಾನು ಮನವಿಯಾಗಲಿ, ಆಗ್ರಹವಾಗಲಿ ಮಾಡಿಲ್ಲ. ಅಲ್ಲದೇ ನನ್ನನ್ನು ತಂಡಕ್ಕೆ ಆಯ್ಕೆ ಮಾಡಲಿ ಎಂದೂ ಬಯಸಿರಲಿಲ್ಲ. ಹೀಗಾಗಿ ನನಗೆ ಅನ್ಯಾಯವಾಗಿದೆ ಎಂದು ಹೇಳುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದು ಎಬಿಡಿ ಮನಬಿಚ್ಚಿ ಮಾತನಾಡಿದ್ದಾರೆ.ಭಾರತ ವಿರುದ್ಧ ದಕ್ಷಿಣ ಆಫ್ರಿಕಾ ತಂಡ ಹೀನಾಯವಾಗಿ ಸೋಲುತ್ತಿದ್ದಂತೆ ಎಬಿಡಿ ನಿವೃತ್ತಿ ಹಿಂಪಡೆದು ದಕ್ಷಿಣ ಆಫ್ರಿಕಾ ತಂಡ ಕೂಡಿಕೊಳ್ಳಲು ಬಯಸಿದ್ದರು ಎಂಬ ವಿಚಾರ ಬೆಳಕಿಗೆ ಬಂದಿತ್ತು. ಈ ವಿಷಯವನ್ನು ನಾನಾಗಲಿ, ಇಲ್ಲವೇ ಡುಪ್ಲೆಸಿಸ್ ಆಗಲಿ ಲೀಕ್ ಮಾಡಿರಲಿಲ್ಲ ಎನ್ನುವುದನ್ನೂ ಸ್ಪಷ್ಟಪಡಿಸಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here