‘ಅಂಬರ್ ಗ್ರೀಸ್’ ಎಂದು ನಂಬಿಸಿ ಮಾರಾಟಕ್ಕೆ ಯತ್ನ-ಮೂವರು ಆರೋಪಿಗಳು ಬೈಂದೂರು ಪೊಲೀಸ್ ವಶ..!

ಉಡುಪಿ : ಕಾಳ ಸಂತೆಯಲ್ಲಿ ಕೋಟ್ಯಾಂತರ ಮೌಲ್ಯ ಹೊಂದಿರುವ ಅಂಬರ್ ಗ್ರೀಸ್ ( ತಿಮಿಂಗಿಲ ವಾಂತಿ ) ಎಂದು ನಂಬಿಸಿ ಮಾರಾಟ ಮಾಡಲು ಯತ್ನಿಸುತ್ತಿದ್ದ ಮೂವರು ಆರೋಪಿಗಳನ್ನು ಉಡುಪಿ ಪೊಲೀಸರು ಬಂಧಿಸಿದ್ದಾರೆ.

ಜಿಲ್ಲೆಯ ಬೈಂದೂರು ತಾಲೂಕಿನ ಯಡ್ತರೆ ಗ್ರಾಮದ ಹೊಸ ಬಸ್ ನಿಲ್ದಾಣದ ಬಳಿ ಮಾಹಿತಿ ಆಧಾರಿಸಿ ದಾಳಿ ನಡೆಸಿದ ಬೈಂದೂರು ಪೊಲೀಸರು ಆರೋಪಿಗಳನ್ನು ಮಾಲು ಸಮೇತ ಬಂಧಿಸಿದ್ದಾರೆ.

ನಿರಂಜನ್ (26), ಮಿಲನ್ ಮೋನಿಶ್ ಶೆಟ್ಟಿ(27), ಪೃಥ್ವಿ ಡಾಮ್ಮಿಕ್ (31) ಬಂಧಿತ ಆರೋಪಿಗಳಾಗಿದ್ದು ಮೂವರು ಕೂಡ ಶಿವಮೊಗ್ಗದವರವರು ಎಂದು ತನಿಖೆಯಿಂದ ತಿಳಿದು ಬಂದಿದೆ.

ಆರೋಪಿಗಳು ಹಳದಿ ಬಣ್ಣದ ಮೇಣದಂತಹ ವಸ್ತುವನ್ನು ತಿಮಿಂಗಲದ ಅಂಬರ್‌ ಗ್ರೀಸ್ ಎಂದು ಹೇಳಿ 10 ಲಕ್ಷ ರೂ ಹಣಕ್ಕೆ ಸಾರ್ವಜನಿಕರಿಗೆ ಮಾರಾಟ ಮಾಡಿ ವಂಚಿಸಲು ಯತ್ನಿಸುತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಅವರಿಂದ ಸುಮಾರು 3 ಕೆ.ಜಿ 910 ಗ್ರಾಂ ತೂಕದ ತಿಮಿಂಗಲದ ಆಂಬರ್‌ ಗ್ರಿಸ್‌ ನಂತಿರುವ ವಸ್ತುವನ್ನು ಸ್ವಾಧೀನಡಿಸಿಕೊಂಡು ಆರೋಪಿತರನ್ನು ದಸ್ತಗಿರಿ ಮಾಡಿದ್ದು ಇವರ ಮೇಲೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಅಕ್ರ 111/2023 ಕಲಂ 420) ಜೊತೆಗೆ 34 ಐಪಿಸಿ ಯಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಈ ರೀತಿ ಮೇಣದಂತಹ ವಸ್ತುವಿಗೆ ತಿಮಿಂಗಲದ ಅಂಬರ್‌ಗ್ರೆಸ್‌ ಎಂದು ಸುಳ್ಳು ಹೇಳಿ ಸಾರ್ವಜನಿಕರನ್ನು ನಂಬಿಸಿ ಮೋಸ ಮಾಡುವ ಜಾಲವು ಕರಾವಳಿಯಲ್ಲಿ ಸಕ್ರಿಯವಾಗಿದ್ದು, ಈ ಬಗ್ಗೆ ಸಾರ್ವಜನಿಕರು ಎಚ್ಚರಿಂದ ಇರುವಂತೆಯೂ, ಈ ರೀತಿಯ ಯಾವುದೇ ಆಮಿಷಕ್ಕೆ ಒಳಗಾಗಬಾರದೆಂದು ಮತ್ತು ಈ ರೀತಿಯ ಯಾವುದೇ ಮಾಹಿತಿ ಇದ್ದಲ್ಲಿ ಸ್ಥಳಿಯ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಪೊಲೀಸರು ಸೂಚನೆ ನೀಡಿದ್ದಾರೆ.

Comments (0)
Add Comment