ಈರುಳ್ಳಿ ಬೆಲೆ ಏರಿಕೆ ತಡೆಗೆ ಮುಂದಾದ ಕೇಂದ್ರ ಸರ್ಕಾರ: ಗ್ರಾಹಕರಿಗೆ ಇನ್ನೂ ತಲುಪದ ಪ್ರಯೋಜನ…!

ನವದೆಹಲಿ : ಪ್ರತಿ ವರ್ಷ ಒಂದಲ್ಲ ಒಂದು ಕಾರಣದಿಂದ ದಿನಬಳಕೆಯ ವಸ್ತುಗಳ ದರ ಸ್ವಲ್ಪ ಸಮಯದವರೆಗೆ ಏರಿಕೆ ಕಾಣುತ್ತಲೇ ಇರುತ್ತದೆ.

ಇತ್ತೀಚೆಗೆ ಟೊಮೆಟೊ ಬೆಲೆ ಗಗನಕ್ಕೇರಿತ್ತು. ಈ ಬೆನ್ನಲ್ಲೇ ಇದೀಗ ಈರುಳ್ಳಿ ದರದಲ್ಲಿ ಹೆಚ್ಚಳ ಕಂಡುಬಂದಿದೆ. ಈಗಾಗಲೇ ಬೆಲೆ ಏರಿಕೆ ತಡೆಗೆ ಸರ್ಕಾರ ಕ್ರಮಕೈಗೊಂಡಿದ್ದು, ಗ್ರಾಹಕರಿಗೆ ಮಾತ್ರ ಇನ್ನೂ ಪ್ರಯೋಜನ ತಲುಪಿಲ್ಲ ಎಂಬ ಆರೋಪಗಳು ಕೇಳಿ ಬಂದಿವೆ.

ಹೌದು, ದೇಶೀಯ ಮಾರುಕಟ್ಟೆಯಲ್ಲಿ ಲಭ್ಯತೆ ಹೆಚ್ಚಿಸಲು ಈರುಳ್ಳಿ ರಫ್ತಿನ ಮೇಲೆ ಶೇ.40 ರಷ್ಟು ಸುಂಕ ವಿಧಿಸಲು ಕೇಂದ್ರ ನಿರ್ಧರಿಸಿದ್ದರೂ ಈರುಳ್ಳಿ ಬೆಲೆ ಇನ್ನೂ ಕಡಿಮೆಯಾಗಿಲ್ಲ. ಸರ್ಕಾರದ ಅಂಕಿ – ಅಂಶಗಳ ಪ್ರಕಾರ, ಶನಿವಾರದಂದು ದೆಹಲಿಯಲ್ಲಿ ತರಕಾರಿ ಚಿಲ್ಲರೆ ಮಾರುಕಟ್ಟೆಗಳಲ್ಲಿ ಕೆಜಿ ಈರುಳ್ಳಿಯು 37 ರೂ.ಗೆ ಮಾರಾಟವಾಗಿದೆ. ಭೋಪಾಲ್, ಬೆಂಗಳೂರು ಮತ್ತು ಜೈಪುರದಂತಹ ನಗರಗಳಲ್ಲಿ ಮಾರಾಟಗಾರರು ಮತ್ತು ಸ್ಥಳೀಯರು ಈರುಳ್ಳಿ ಬೆಲೆ ಏರಿಕೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.

ಕಳೆದ ಒಂದು ವಾರದಲ್ಲಿ ಸಗಟು ಮಾರುಕಟ್ಟೆಯಲ್ಲಿ ಕೆಜಿ ಈರುಳ್ಳಿಯು 12 ರೂ. ಗೆ ಮಾರಾಟವಾಗುತ್ತಿತ್ತು. ಇದೀಗ ದಿಢೀರ್​ ದರ ಏರಿಕೆಯಾಗಿದೆ. ನಾಸಿಕ್‌ನಲ್ಲಿ ಅಕಾಲಿಕ ಮಳೆಯಿಂದ ಈರುಳ್ಳಿ ಪೂರೈಕೆ ಕುಂಠಿತವಾಗಿದ್ದು, ಬೆಲೆ ಮೇಲೆ ಪರಿಣಾಮ ಬೀರಿದೆ.

ಇನ್ನೊಂದೆಡೆ, ಕೇಂದ್ರ ಸರ್ಕಾರವು ಈರುಳ್ಳಿ ಬಫರ್​ ಸ್ಟಾಕ್​ ಮಿತಿಯನ್ನು 3 ಲಕ್ಷ ಮೆಟ್ರಿಕ್​​ ಟನ್​ಗಳಿಂದ 5 ಲಕ್ಷ ಮೆಟ್ರಿಕ್​ ಟನ್​ಗಳಿಗೆ ಹೆಚ್ಚಿಸಿದೆ. ಸರ್ಕಾರ ಈ ವರ್ಷ 3 ಲಕ್ಷ ಟನ್ ಬಫರ್ ಈರುಳ್ಳಿಯನ್ನು ಉಳಿಸಿಕೊಂಡಿದೆ. ಈಗ ಹೆಚ್ಚುವರಿಯಾಗಿ 2 ಲಕ್ಷ ಮೆಟ್ರಿಕ್ ಟನ್ ಈರುಳ್ಳಿ ದಾಸ್ತಾನಿಗೆ ಮುಂದಾಗಿದೆ. ಕಳೆದ ವಾರದಿಂದ ಪ್ರಮುಖ ಸಗಟು ಮಾರುಕಟ್ಟೆ ಸ್ಥಳಗಳಲ್ಲಿ ಈರುಳ್ಳಿ ವಿಲೇವಾರಿ ಮಾಡಲು ಪ್ರಾರಂಭಿಸಿದೆ. ಇಲ್ಲಿಯವರೆಗೆ, ದೆಹಲಿ, ಅಸ್ಸೋಂ, ಹಿಮಾಚಲ ಪ್ರದೇಶ, ತೆಲಂಗಾಣ ಮತ್ತು ಆಂಧ್ರಪ್ರದೇಶದ ಸಗಟು ಮಂಡಿಗಳಲ್ಲಿ 2,000 ಟನ್ ಬಫರ್ ಈರುಳ್ಳಿ ಮಾರಾಟವಾಗಿದೆ.

ಮಧ್ಯಪ್ರದೇಶ, ಛತ್ತೀಸ್‌ಗಢ ಮತ್ತು ತೆಲಂಗಾಣದಂತಹ ಪ್ರಮುಖ ರಾಜ್ಯಗಳಲ್ಲಿ ವರ್ಷಾಂತ್ಯದಲ್ಲಿ ವಿಧಾನಸಭಾ ಚುನಾವಣೆಗಳು ನಡೆಯಲಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಮೊದಲೇ ಎಚ್ಚೆತ್ತುಕೊಂಡು ಈರುಳ್ಳಿ ರಫ್ತಿನ ಮೇಲೆ ಶೇ 40ರಷ್ಟು ಸುಂಕ ವಿಧಿಸಿದೆ. ಈ ಆದೇಶವು ವರ್ಷದ ಡಿಸೆಂಬರ್ 31 ರವರೆಗೆ ಅನ್ವಯಿಸುತ್ತದೆ.

ಮೊದಲು ಈರುಳ್ಳಿಯು ಕಿಲೋಗೆ 10-15 ರೂಪಾಯಿಗೆ ಮಾರಾಟವಾಗುತ್ತಿತ್ತು. ಆದರೆ, ಈಗ 30 ರೂಪಾಯಿಗೆ ಮಾರಾಟವಾಗುತ್ತಿದೆ. ಹೀಗೆ ಮುಂದುವರೆದರೆ ಬಡವರ ಮೇಲೆ ದುಷ್ಪರಿಣಾಮ ಬೀರುತ್ತದೆ, ಟೊಮೆಟೊ ಮತ್ತು ಆಲೂಗಡ್ಡೆಯಂತೆಯೇ ಈರುಳ್ಳಿಯೂ ಆಗುತ್ತದೆ ಎಂದು ಸಗಟು ವ್ಯಾಪಾರಿಯೊಬ್ಬರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Comments (0)
Add Comment