ಕರ್ಣಾಟಕ ಬ್ಯಾಂಕ್ ಡಿಸೆಂಬರ್ ತ್ರೈಮಾಸಿಕದಲ್ಲಿ ರೂ 331 ಕೋಟಿ ನಿವ್ವಳ ಲಾಭ

ಮಂಗಳೂರು: ಕರ್ಣಾಟಕ ಬ್ಯಾಂಕ್ 2023-24 ರ ಹಣಕಾಸು ವರ್ಷದ ಡಿಸೆಂಬರ್ ತ್ರೈಮಾಸಿಕದಲ್ಲಿ ರೂ 331 ಕೋಟಿ ನಿವ್ವಳ ಲಾಭವನ್ನು ಘೋಷಿಸಿದೆ. ಇದು ಹಿಂದಿನ ವರ್ಷದ ಅವಧಿಯಲ್ಲಿ ರೂ 300.68 ಕೋಟಿಗಳಿಂದ 10 ಪ್ರತಿಶತ ಹೆಚ್ಚಾಗಿದೆ.
ಮಂಗಳೂರಿನಲ್ಲಿ ಮಂಗಳವಾರ ನಡೆದ ಬ್ಯಾಂಕಿನ ಆಡಳಿತ ಮಂಡಳಿಯ ಸಭೆಯಲ್ಲಿ ಹಣಕಾಸು ವರ್ಷ 2023-24ರ ತೃತೀಯ ತ್ರೈಮಾಸಿಕದ ಹಣಕಾಸು ವರದಿ ಅಂಗೀಕರಿಸಲಾಯಿತು.

ಬ್ಯಾಂಕಿನ ಒಟ್ಟು ವ್ಯವಹಾರವು, ವಾರ್ಷಿಕ ಶೇ 9.22ರ ದರದಲ್ಲಿ ವೃದ್ಧಿ ಕಂಡಿದ್ದು, ₹1,61,936.36 ಕೋಟಿಗೆ ಏರಿದೆ. ಬ್ಯಾಂಕಿನ ಮುಂಗಡಗಳು ಶೇ 9.53ರ ದರದಲ್ಲಿ ವೃದ್ಧಿ ಕಂಡು ₹69,740.97 ಕೋಟಿಗಳಷ್ಟಿವೆ ಹಾಗೂ ಠೇವಣಿಗಳು ಶೇ 8.98ರ ದರದಲ್ಲಿ ವೃದ್ಧಿ ಕಂಡು ₹92,195.39 ಕೋಟಿಗಳಿಗೆ ತಲುಪಿವೆ. ಬ್ಯಾಂಕಿನ ವಸೂಲಾಗದ ಒಟ್ಟು ಸಾಲಗಳು (ಜಿಎನ್‌ಪಿಎ) 10 ಬೇಸಿಸ್ ಪಾಯಿಂಟ್‌ಗಳಷ್ಟು ಕಡಿಮೆಯಾಗಿದ್ದು, ಶೇ 3.64ಕ್ಕೆ ಇಳಿಕೆ ಕಂಡಿವೆ. ಇದು ಮಾರ್ಚ್ 2023ರಲ್ಲಿ ಶೇ 3.74 ರಷ್ಟಿತ್ತು. ವಸೂಲಾಗದ ನಿವ್ವಳ ಸಾಲಗಳು (ಎನ್‌ಎನ್‌ಪಿಎ) ಕೂಡ 15 ಬೇಸಿಸ್ ಪಾಯಿಂಟ್‌ಗಳಷ್ಟು ಕಡಿಮೆಯಾಗಿದ್ದು, ಶೇ 1.55 ಕ್ಕೆ ಇಳಿಕೆ ಕಂಡಿವೆ. ಇದು ಮಾರ್ಚ್ 2023ರಲ್ಲಿ ಶೇ 1.70 ರಷ್ಟಿತ್ತು.

ಈ ಫಲಿತಾಂಶದ ಬಗ್ಗೆ ಹರ್ಷ ವ್ಯಕ್ತಪಡಿಸಿ ಮಾತನಾಡಿದ ಬ್ಯಾಂಕಿನ ಎಂಡಿ ಹಾಗೂ ಸಿಇಒ ಶ್ರೀಕೃಷ್ಣನ್ ಎಚ್., ‘ಕರ್ಣಾಟಕ ಬ್ಯಾಂಕಿನ ಸರ್ವಾಂಗೀಣ ಅಭಿವೃದ್ಧಿಗೆ ಹಾಗೂ ಕಾರ್ಯಕ್ಷಮತೆಗೆ ಬ್ಯಾಂಕ್ ಕೈಗೊಂಡ ಸುಧಾರಿತ ಕಾರ್ಯಾಚರಣೆಗಳು ಹಾಗೂ ಬದಲಾವಣೆಗಳು ಕಾರಣ. ನಾವು ಆರ್ಥಿಕ ಕ್ಷೇತ್ರದಲ್ಲಿ ಹೆಚ್ಚು ಪ್ರಸ್ತುತವಾಗಲು ಪ್ರಜ್ಞಾಪೂರ್ವಕವಾಗಿ ಕೆಲಸ ಮಾಡಿದ್ದೇವೆ ಮತ್ತು ಹಲವಾರು ಹೊಸ ಯೋಜನೆಗಳನ್ನು ಪ್ರಾರಂಭಿಸಿದ್ದೇವೆ. ನಮ್ಮ ಶತಮಾನೋತ್ಸವದ ವರ್ಷದಲ್ಲಿ ನಾವು ಸಮರ್ಪಕವಾದ ಅಭಿವೃದ್ಧಿ ಪಥದಲ್ಲಿದ್ದೇವೆ’ ಎಂದರು.

Comments (0)
Add Comment