‘ಕೈ’ನಲ್ಲಿ ತಗ್ಗದ ವೈಮನಸ್ಸು: ಆಗಸ್ಟ್‌ 2ರಂದು ರಾಜ್ಯ ನಾಯಕರೊಂದಿಗೆ ಕಾಂಗ್ರೆಸ್‌ ಹೈಕಮಾಂಡ್ ಸಭೆ

ನವದೆಹಲಿ: ಕರ್ನಾಟಕದಲ್ಲಿ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಸ್ವಪಕ್ಷದ ಶಾಸಕರ ಮುನಿಸು ಹೆಚ್ಚಾಗಿದೆ. ಸಚಿವರ ನಡೆದ ವಿರುದ್ಧ ಶಾಸಕರ ಅಸಮಾಧಾನ, ಬೇಗುದಿ ಹೆಚ್ಚಾದ ಹಿನ್ನೆಲೆ ಎಚ್ಚೆತ್ತಿರುವ ಪಕ್ಷದ ಹಿರಿಯ ನಾಯಕರ ಜತೆಗೆ ಆಗಸ್ಟ್‌ 2ರಂದು ನವದೆಹಲಿಯಲ್ಲಿ ಸಭೆ ನಡೆಸಲು ಹೈಕಮಾಂಡ್ ತೀರ್ಮಾನಿಸಿದೆ. ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ನಾಯಕ ರಾಹುಲ್‌ ಗಾಂಧಿ ನೇತೃತ್ವದಲ್ಲಿ ಆಗಸ್ಟ್‌ 2ರಂದು ಮಧ್ಯಾಹ್ನ 2 ಗಂಟೆಗೆ ಸಭೆ ನಡೆಯಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಸೇರಿದಂತೆ ರಾಜ್ಯದ ಹಿರಿಯ ನಾಯಕರು ಪಾಲ್ಗೊಳ್ಳಲಿದ್ದಾರೆ. ಇತ್ತೀಚೆಗೆ ಸಿಎಂ ಸಿದ್ದರಾಮಯ್ಯ ವಿರುದ್ಧ ಅಸಮಾಧಾನ ಹೊರಹಾಕಿದ್ದ ಎಂಎಲ್​ಸಿ ಬಿಕೆ ಹರಿಪ್ರಸಾದ್ ಅವರಿಗೂ ಬುಲಾವ್ ನೀಡಿದೆ. ಸಚಿವ ಸಂಪುಟದ ಎಲ್ಲ ಸದಸ್ಯರು ಸಭೆಯಲ್ಲಿ ಭಾಗಿಯಾಗುವ ಸಾಧ್ಯತೆ ಇದೆ. ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಹಾಗೂ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್‌ ಸಹ ಭಾಗವಹಿಸಲಿದ್ದಾರೆ. ತಾವು ಮಾಡಿರುವ ವರ್ಗಾವಣೆ ಶಿಫಾರಸುಗಳಿಗೆ ಸಚಿವರು ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿ 30ಕ್ಕೂ ಹೆಚ್ಚು ಶಾಸಕರು ಮುಖ್ಯಮಂತ್ರಿ ಅವರಿಗೆ ಜುಲೈ 24ರಂದು ಪತ್ರ ಬರೆದಿದ್ದರು. ಎಲ್ಲ ಸಚಿವರ ಜತೆಗೆ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್‌ ಗಾಂಧಿ ಅವರ ಸಭೆ ಜೂನ್‌ ತಿಂಗಳಲ್ಲಿ ನಿಗದಿಯಾಗಿತ್ತು. ಆದರೆ ಕೊನೆಯ ಕ್ಷಣದಲ್ಲಿ ಈ ಸಭೆ ರದ್ದಾಗಿತ್ತು.

Comments (0)
Add Comment