ಕ್ರಿಕೆಟ್ ಟೂರ್ನಿಗಳಲ್ಲಿ ಅವಕಾಶ ಕೊಡಿಸುವುದಾಗಿ ಲಕ್ಷ ಲಕ್ಷ ವಂಚನೆ ಆರೋಪ – ಮಾಜಿ ಆಟಗಾರನ ವಿರುದ್ಧ ಎಫ್ಐಆರ್

ಬೆಂಗಳೂರು : ಕ್ರಿಕೆಟ್ ಟೂರ್ನಿಗಳಲ್ಲಿ ಆಡುವ ಅವಕಾಶ, ತರಬೇತಿ ಮತ್ತು ಅಗತ್ಯ ಸಾಮಗ್ರಿಗಳನ್ನ ಕೊಡಿಸುವುದಾಗಿ ಹಣ ಪಡೆದು ವಂಚಿಸಿದ ಆರೋಪದಡಿ ಇಂಡಿಯಾ ಅಂಡರ್ 19 ಹಾಗೂ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪ್ರತಿನಿಧಿಸಿದ್ದ ಮಾಜಿ ಆಲ್ ರೌಂಡರ್ ಗೌರವ್ ಧಿಮಾನ್ ವಿರುದ್ಧ ಪ್ರಕರಣ ದಾಖಲಾಗಿದೆ.

23 ವರ್ಷದ ಯುವ ಕ್ರಿಕೆಟಿಗನಿಗೆ 12.23 ಲಕ್ಷ ರೂ. ವಂಚಿಸಿರುವ ಆರೋಪ ಕೇಳಿ ಬಂದಿದ್ದು, ಆತನ ತಂದೆ ನೀಡಿದ ದೂರಿನನ್ವಯ ಉಪ್ಪಾರಪೇಟೆ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಪರ ಆಡುತ್ತಿರುವ ಯುವ ಕ್ರಿಕೆಟಿಗನೊಬ್ಬ‌ 2022-23ರಲ್ಲಿ ಗಾಂಧಿನಗರದ ಸಿಎಂಎಸ್ ಬ್ಯುಸಿನೆಸ್ ಸ್ಕೂಲ್‌ನಲ್ಲಿರುವ ರೋರ್ ಕ್ರಿಕೆಟ್ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿದ್ದರು. ಈ ಸಮಯದಲ್ಲಿ ಅಕಾಡೆಮಿಯ ಕೋಚ್ ಆಗಿದ್ದ ಗೌರವ್ ಧಿಮಾನ್, ಕೆಎಸ್ಸಿಎಯ ಮುಂದಿನ ಕೆಲ ಟೂರ್ನಿಗಳಿಗೆ ಆರಂಭಿಕ ಆಟಗಾರನಾಗಿ ಅವಕಾಶ ಕೊಡಿಸುವುದಾಗಿ ನಂಬಿಸಿದ್ದಾರೆ. ಮತ್ತು ಆತನ ತಂದೆಯನ್ನ ಭೇಟಿಯಾಗಿ ಉತ್ತಮ ತರಬೇತಿ, ಬ್ಯಾಟ್ ಗಳನ್ನ ಕೊಡಿಸುವುದಾಗಿ, ಹಾಗೂ ಇದಕ್ಕಾಗಿ ಪ್ರಸ್ತುತ ಆಡುತ್ತಿರುವ ಕ್ಲಬ್ ಪರ ಆಡಬಾರದು ಎಂದಿದ್ದಾರೆ. ನಂತರ ಬ್ಯಾಟ್ ಮತ್ತಿತರ ಕ್ರಿಕೆಟ್ ಸಾಮಗ್ರಿಗಳನ್ನ ಕೊಡಿಸುವುದಾಗಿ ಹಂತಹಂತವಾಗಿ 12.23 ಲಕ್ಷ ಪಡೆದುಕೊಂಡಿದ್ದಾರೆ. ಆದರೆ ಯಾವುದೇ ಟೂರ್ನಿಗಳಲ್ಲಿ ಅವಕಾಶ ಕೊಡಿಸದೇ ವಂಚಿಸಿದ್ದಾರೆ ಎಂದು ದೂರಲಾಗಿದೆ. ವಂಚನೆಗೊಳಗಾದ ಕ್ರಿಕೆಟಿಗನ ತಂದೆ 2023ರಲ್ಲಿ ಉಪ್ಪಾರಪೇಟೆ ದೂರು ನೀಡಿದ್ದನ್ನ ತಿಳಿದ ಆರೋಪಿಯ ತಂದೆ, ತಮ್ಮನ್ನ ಭೇಟಿಯಾಗಿ ತಾನೊಬ್ಬ ನಿವೃತ್ತ ಕರ್ನಲ್ ಹಾಗೂ ಗೌರವಾನ್ವಿತ ಕುಟುಂಬಕ್ಕೆ ಸೇರಿದ ವ್ಯಕ್ತಿ. ತಮ್ಮ ಮಗ ವಿದೇಶಕ್ಕೆ ತೆರಳಿದ್ದು, ಆತ ಬಂದ ನಂತರ ಹಣ ವಾಪಾಸ್ ಕೊಡಿಸುತ್ತೇನೆ ಎಂದು ಭರವಸೆ ನೀಡಿ ತಮ್ಮ ಮಗ ಮಾಡಿದ ತಪ್ಪಿಗೆ ಕ್ಷಮೆಯಾಚಿಸಿದ್ದಾರೆ. ಆದರೆ, ಆರೋಪಿ ಗೌರವ್ ಧಿಮಾನ್ ವಿದೇಶದಿಂದ ಮರಳಿದ ಬಳಿಕ ಭೇಟಿಯಾಗಿ ಹಣ ವಾಪಸ್ ಕೇಳಿದಾಗ, ನಿನ್ನ ಮಗನ ಭವಿಷ್ಯ ಹಾಳು ಮಾಡುತ್ತೇನೆ, ನನಗೆ ರೌಡಿಗಳ ಸಂಪರ್ಕವಿದ್ದು, ನಿನ್ನ ಮಗನನ್ನ ಅಪಘಾತ ಮಾಡಿಸಿ ಕೊಲೆ ಮಾಡಿಸುತ್ತೇನೆ ಎಂದು ಅವಾಚ್ಯವಾಗಿ ನಿಂದಿಸಿದ್ದಾರೆ ಎಂದು ದೂರಲಾಗಿದೆ. ತನ್ನ ತಂದೆ ನಿವೃತ್ತ ಕರ್ನಲ್ ಆಗಿದ್ದು, ಅವರಿಗೆ ಹಿರಿಯ ಅಧಿಕಾರಿಗಳು ಹಾಗೂ ರಾಜಕಾರಣಿಗಳ ಪರಿಚಯವಿದೆ ನೀವು ಏನೂ ಮಾಡಲು ಸಾಧ್ಯವಿಲ್ಲ ಎಂದು ಬೆದರಿಕೆ ಹಾಕಿದ್ದಾರೆ ಎಂದು ಕ್ರಿಕೆಟಿಗನ ತಂದೆ ಆರೋಪಿಸಿ ದೂರು ನೀಡಿದ್ದಾರೆ.

Comments (0)
Add Comment