ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ ಕುರಿತ ಸ್ಪೋಟಕ ಮಾಹಿತಿ ಬಹಿರಂಗ?

ನವದೆಹಲಿ:ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ ಕುರಿತ ಸ್ಪೋಟಕ ಮಾಹಿತಿಯೊಂದನ್ನು ಭಾರತೀಯ ಗುಪ್ತಚರ ಸಂಸ್ಥೆ ಬಹಿರಂಗ ಮಾಡಿದೆ.

ಭಾರತೀಯ ಗುಪ್ತಚರ ಸಂಸ್ಥೆಯ ಮಾಹಿತಿ ಪ್ರಕಾರ ನಿಜ್ಜರ್ ಕೆನಡಾದಲ್ಲಿ ಭಯೋತ್ಪಾದನಾ ಚಟುವಟಿಕೆ ನಡೆಸುತ್ತಿದ್ದು, ಅಲ್ಲಿ ಕೆಲ ಮಂದಿಗೆ ಶಸ್ತ್ರಾಸ್ತ್ರ ತರಬೇತಿಯನ್ನು ನೀಡುತ್ತಿದ್ದ ಜೊತೆಗೆ ಭಾರತದಲ್ಲಿನ ದಾಳಿಗಳಿಗೆ ಹಣದ ಸಹಾಯ ಮಾಡುವಲ್ಲಿ ಸಕ್ರಿಯನಾಗಿದ್ದ ಎಂಬ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ.

ನಿಜ್ಜರ್ ಪಾಕಿಸ್ತಾನದ ಗುಪ್ತಚರ ಸಂಸ್ಥೆ ISI ಯ ಸಹಾಯದಿಂದ ಪಾಕಿಸ್ತಾನದಲ್ಲಿ ತರಬೇತಿ ಪಡೆದಿದ್ದನು ಮತ್ತು ದೇಶದ ಇತರ ಖಲಿಸ್ತಾನಿ ನಾಯಕರೊಂದಿಗೆ ಸಂಪರ್ಕವನ್ನು ಕೂಡ ಹೊಂದಿದ್ದನು. ಜೊತೆಗೆ ಪಂಜಾಬ್ ಮತ್ತು ಭಾರತದ ಇತರ ಭಾಗಗಳಲ್ಲಿ ನಡೆದ ಭಯೋತ್ಪಾದಕ ಚಟುವಟಿಕೆಗಳಿಗೆ ಧನಸಹಾಯ ಮಾಡಿ ನಿಜ್ಜರ್ ಖಲಿಸ್ತಾನಿ ಚಟುವಟಿಕೆಗಳನ್ನು ನಿರ್ಭಿತಿಯಿಂದ ನಡೆಸುತ್ತಿದ್ದ ಎನ್ನಲಾಗಿದೆ.

ಭಾರತದ ಮೋಸ್ಟ್-ವಾಂಟೆಡ್ ಭಯೋತ್ಪಾದಕರಲ್ಲಿ ಒಬ್ಬನಾಗಿದ್ದ ನಿಜ್ಜರ್‌ನನ್ನು ಜೂನ್ 18 ರಂದು ಕೆನಡಾದ ಬ್ರಿಟಿಷ್ ಕೊಲಂಬಿಯಾ ಪ್ರಾಂತ್ಯದ ಸರ್ರೆಯಲ್ಲಿ ಗುಂಡಿಕ್ಕಿ ಕೊಲ್ಲಲಾಗಿತ್ತು.

ಕೆನಡಾದಲ್ಲಿ ಶಸ್ತ್ರಾಸ್ತ್ರ ತರಬೇತಿ ಶಿಬಿರಗಳನ್ನು ನಡೆಸುತ್ತಿದ್ದು ಅಲ್ಲಿ ಆತ AK-47, ರೈಫಲ್‌ಗಳು ಮತ್ತು ಬಂದೂಕುಗಳನ್ನು ಬಳಸುವ ಕುರಿತು ತರಬೇತಿ ನೀಡುತ್ತಿದ್ದನಂತೆ. ಅಲ್ಲದೆ ಭಾರತದಲ್ಲಿರುವ ರಾಜಕೀಯ ಹಾಗೂ ಧಾರ್ಮಿಕ ವ್ಯಕ್ತಿಗಳ ಮೇಲೆ ದಾಳಿ ನಡೆಸಲು ಜನರನ್ನು ಕಳುಹಿಸುವ ಕೆಲಸ ಮಾಡುತ್ತಿದ್ದ ಎಂಬ ಆಘಾತಕಾರಿ ಅಂಶ ಹೊರಬಿದ್ದಿದೆ.
ನಿಜ್ಜಾರ್ 1996 ರಲ್ಲಿ ರವಿ ಶರ್ಮಾ ಎಂಬ ಹೆಸರಿನಲ್ಲಿ ನಕಲಿ ಪಾಸ್‌ಪೋರ್ಟ್‌ ಮಾಡಿ ಪಂಜಾಬ್ ನಿಂದ ಕೆನಡಾಕ್ಕೆ ಪರಾರಿಯಾಗಿ ಆತ ಟ್ರಕ್ ಡ್ರೈವರ್ ಮತ್ತು ಪ್ಲಂಬರ್ ಆಗಿ ಕೆಲಸ ಮಾಡುತ್ತಿದ್ದ. ಕೆನಡಾದಲ್ಲಿ ಭಾರತ ವಿರೋಧಿ ಪ್ರತಿಭಟನೆಗಳನ್ನು ಆಯೋಜಿಸಿದ್ದ ಮತ್ತು ಭಾರತೀಯ ರಾಜತಾಂತ್ರಿಕರಿಗೆ ಬೆದರಿಕೆಗಳನ್ನೂ ಹಾಕುತಿದ್ದ ಎಂಬ ಮಾಹಿತಿ ಬಹಿರಂಗವಾಗಿದೆ.

Comments (0)
Add Comment