ಚಿತ್ರರಂಗಕ್ಕೆ ಮತ್ತೊಂದು ಹೃದಯಾಘಾತದ ಶಾಕ್​: ಖ್ಯಾತ ನಿರ್ದೇಶಕ ಸಿದ್ಧಿಕಿ ಸ್ಥಿತಿ ಗಂಭೀರ

ಕೊಚ್ಚಿ: ಸ್ಯಾಂಡಲ್‌ವುಡ್‌ ನಟ ವಿಜಯರಾಘವೇಂದ್ರ ಅವರ ಪತ್ನಿ ಸ್ಪಂದನಾ ಅವರು ಹೃದಯಾಘಾತದಿಂದ ಮೃತಪಟ್ಟ ಬೆನ್ನಲ್ಲೇ ಭಾರತೀಯ ಚಿತ್ರರಂಗಕ್ಕೆ ಮತ್ತೊಂದು ಶಾಕಿಂಗ್​ ಸುದ್ದಿ ಕೇಳಿಬಂದಿದೆ. ಹೌದು. ಮಲಯಾಳಂ ಚಿತ್ರರಂಗದ ಖ್ಯಾತ ನಿರ್ದೇಶಕ ಮತ್ತು ನಿರ್ಮಾಪಕ ಸಿದ್ಧಿಕಿ ಅವರಿಗೆ ನಿನ್ನೆ (ಆಗಸ್ಟ್​ 07) ಹೃದಯಾಘಾತವಾಗಿದ್ದು, ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಅವರನ್ನು ಕೂಡಲೇ ಕೊಚ್ಚಿಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅನೇಕ ಗಮನಾರ್ಹ ಸಿನಿಮಾಗಳಿಗೆ ನಿರ್ದೇಶನ ಮಾಡಿರುವ ಖ್ಯಾತಿ ಸಿದ್ಧಿಕಿ ಅವರಿಗೆ ಇದೆ. ಈಗ ಅವರಿಗೆ 69 ವರ್ಷ ವಯಸ್ಸಾಗಿದ್ದು, ಹೃದಯಾಘಾತದ ಬಳಿಕ ಪರಿಸ್ಥಿತಿ ಗಂಭೀರವಾಗಿದೆ ಎಂದು ವರದಿ ಆಗಿದೆ. ಸಿದ್ಧಿಕಿ ಅವರು ನ್ಯುಮೋನಿಯಾ ಮತ್ತು ಲಿವರ್‌ಗೆ ಸಂಬಂಧಿಸಿದ ಖಾಯಿಲೆಗಳಿಗೆ ಚಿಕಿತ್ಸೆ ಪಡೆಯುತ್ತಿದ್ದರು. ಇದರ ನಡುವೆ ಹೃದಯಾಘಾತವಾಗಿರುವುದರಿಂದ ಅವರ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. 1986ರಲ್ಲಿ ತೆರೆಕಂಡ ‘ಪಪ್ಪನ್ ಪ್ರಿಯಪ್ಪೆತ್ತ ಪಪ್ಪನ್’ ಸಿನಿಮಾಗೆ ಚಿತ್ರಕತೆ ಬರೆಯುವುದರೊಂದಿಗೆ ಸಿನಿ ಪಯಣ ಆರಂಭಿಸಿದ ಸಿದ್ಧಿಕಿ, 1989ರಲ್ಲಿ ಬಿಡುಗಡೆಯಾದ ‘ರಾಮ್‌ಜಿ ರಾವ್‌ ಸ್ಪೀಕಿಂಗ್‌’ ಸಿನಿಮಾ ಮೂಲಕ ನಿರ್ದೇಶಕರಾದರು. ಅವರು ನಿರ್ದೇಶನ ಮಾಡಿರುವ ಕೊನೇ ಸಿನಿಮಾ ‘ಬಿಗ್‌ ಬ್ರದರ್‌’ 2020ರಲ್ಲಿ ಬಿಡುಗಡೆಯಾಗಿದೆ. ಮಲಯಾಳಂ ಮಾತ್ರವಲ್ಲದೆ ತಮಿಳು, ಹಿಂದಿಯಲ್ಲೂ ಸಿನಿಮಾ ನಿರ್ದೇಶಿಸಿದ ಖ್ಯಾತಿ ಅವರದ್ದು. ಮಲಯಾಳಂನ ‘ರಾಮ್​ಜಿ ರಾವ್​ ಸ್ಪೀಕಿಂಗ್​’, ‘ಇನ್​ ಹರಿಹರ್​ ನಗರ್​’, ‘ಗಾಡ್​ಫಾದರ್​’, ‘ವಿಯಾಟ್ನಾಂ ಕಾಲೋನಿ’, ‘ಕಾಬೂಲಿವಾಲಾ’ ಮುಂತಾದ ಸಿನಿಮಾಗಳಿಗೆ ಸಿದ್ಧಿಕಿ ನಿರ್ದೇಶನ ಮಾಡಿದ್ದಾರೆ. ಸಿದ್ಧಿಕಿ ಇಸ್ಮಾಯಿಲ್​ ಎಂಬುದು ಅವರ ಪೂರ್ಣ ಹೆಸರು. ನಿರ್ದೇಶನದ ಜೊತೆಗೆ ಕೆಲವು ಸಿನಿಮಾಗಳಲ್ಲಿ ಅವರು ಅತಿಥಿ ಪಾತ್ರ ಮಾಡುವ ಮೂಲಕವೂ ಪ್ರೇಕ್ಷಕರಿಗೆ ಪರಿಚಿತರಾಗಿದ್ದಾರೆ.

Comments (0)
Add Comment