ಜಮ್ಮು- ಕಾಶ್ಮೀರ ಹೆದ್ದಾರಿಯಲ್ಲಿ ಸುಧಾರಿತ ಸ್ಫೋಟಕ ಪತ್ತೆ.. ನಿಷ್ಕ್ರಿಯಗೊಳಿಸಿದ ಭದ್ರತಾ ಸಿಬ್ಬಂದಿ…!

ಜಮ್ಮುವಿನಲ್ಲಿ ಸಂಭವಿಸುತ್ತಿದ್ದ ಭಾರಿ ದುರಂತವೊಂದು ಭದ್ರತಾ ಪಡೆಯ ಪರಿಶೀಲನೆಯಿಂದ ತಪ್ಪಿದೆ.

ಜಮ್ಮು-ಶ್ರೀನಗರದ ರಾಷ್ಟ್ರೀಯ ಹೆದ್ದಾರಿಯಲ್ಲಿ ಶಂಕಿತ ಉಗ್ರರು ಸುಧಾರಿತ ಸ್ಫೋಟಕ ಸಾಧನವನ್ನು (improvised explosive device) ಹುದುಗಿಸಿಟ್ಟಿದ್ದರು. ಅನುಮಾನಗೊಂಡಿದ್ದ ಭದ್ರತಾ ಪಡೆ ತ್ವರಿತ ಕಾರ್ಯಾಚರಣೆ ಮಾಡಿ, ಸ್ಫೋಟಕ ಸಾಧನವನ್ನು ಪತ್ತೆ ಹಚ್ಚಿ ನಿಷ್ಕ್ರಿಯಗೊಳಿಸಿದೆ.

ಘಟನೆ ಕುರಿತು ಜಮ್ಮುವಿನ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಎಸ್‌ಪಿ) ಚಂದನ್ ಕೊಹ್ಲಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ. “ಜಮ್ಮುವಿನ ನಗ್ರೋಟಾದ ಪಂಜ್‌ಗ್ರೇನ್ ಪ್ರದೇಶದಲ್ಲಿ ಹೆದ್ದಾರಿ ಪಕ್ಕದಲ್ಲಿ ಅನುಮಾನಾಸ್ಪದ ವಸ್ತುವೊಂದು ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ತಾಂತ್ರಿಕ ಪರೀಕ್ಷೆಯನ್ನು ತಕ್ಷಣವೇ ಪ್ರಾರಂಭಿಸಲಾಯಿತು. ಜತೆಗೆ ಹೆದ್ದಾರಿಯಲ್ಲಿ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು.

ಪತ್ತೆಯಾಗಿದ್ದ ಅನುಮಾನಾಸ್ಪದ ವಸ್ತುವು ಸುಧಾರಿತ ಸ್ಫೋಟಕ ಸಾಧನವಾಗಿತ್ತು (ಐಇಡಿ). ಬಳಿಕ ಬಾಂಬ್ ನಿಷ್ಕ್ರಿಯ ದಳವನ್ನು ಸ್ಥಳಕ್ಕೆ ಕರೆಸಲಾಯಿತು. ನಿಯಂತ್ರಿತ ಕಾರ್ಯವಿಧಾನದ ಮೂಲಕ ಸ್ಫೋಟಕವನ್ನು ನಿಷ್ಕ್ರಿಯಗೊಳಿಸಲಾಗಿದೆ. ಸಂಬಂಧಿಸಿದ ಕಾನೂನು ಸೆಕ್ಷನ್‌ಗಳಡಿ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಗೊಳ್ಳಲಾಗಿದೆ. ಹೆದ್ದಾರಿಯಲ್ಲಿ ಸ್ಥಗಿತಗೊಳಿಸಲಾಗಿದ್ದ ವಾಹನ ಸಂಚಾರವನ್ನು ಮತ್ತೆ ಮರುಸ್ಥಾಪಿಸಲಾಗಿದೆ” ಎಂದು ಅವರು ಹೇಳಿದ್ದಾರೆ.

ಕಾರ್ಗಿಲ್​ನಲ್ಲಿ ನಿಗೂಡ ಸ್ಫೋಟಕ್ಕೆ 3 ಬಲಿ: ಕೇಂದ್ರಾಡಳಿತ ಪ್ರದೇಶ ಲಡಾಖ್​ನ ಕಾರ್ಗಿಲ್​ನ ಜಿಲ್ಲೆಯಲ್ಲಿ ಆಗಸ್ಟ್​ 18ರ ತಡರಾತ್ರಿ ಅನುಮಾನಾಸ್ಪದ ವಸ್ತು ಸ್ಫೋಟಗೊಂಡಿತ್ತು. ಪರಿಣಾಮ ಮೂವರು ಸಾವನ್ನಪ್ಪಿ, ಎಂಟು ಮಂದಿ ಗಾಯಗೊಂಡಿದ್ದರು. ಘಟನೆ ಕುರಿತು ಎಸ್​ಪಿ ಅನಾಯತ್​ ಅಲಿ ಚೌಧರಿ ಮಾಹಿತಿ ನೀಡಿದ್ದರು. ಜೊತೆಗೆ ಸ್ಫೋಟದ ಸ್ವರೂಪವನ್ನು ತನಿಖೆ ಮಾಡಲಾಗುತ್ತಿದೆ ಎಂದಿದ್ದರು.

ಮೋದಿ ಸೇರಿದಂತೆ ದೇಶಾದ್ಯಂತ ಬಾಂಬ್​ ಸ್ಫೋಟದ ಬೆದರಿಕೆ: ಒಂದೇ ಸಮನೆ ಭಾರತದ ವಿರುದ್ಧ ಸ್ಫೋಟದ ಬೆದರಿಕೆ ಕರೆ, ಬರುತ್ತಲೇ ಇದೆ. ಮೊನ್ನೆ ತಾನೆ ವಿದೇಶದಿಂದ ಮೋದಿ ಹತ್ಯೆ ಮಾಡಿ, ವಿವಿಧೆಡೆ ಸ್ಫೋಟಕ್ಕೆ ಸಂಚು ರೂಪಿಸಿದ ಬಗ್ಗೆ ಬೆದರಿಕೆ ಮೇಲ್​ ಬಂದಿತ್ತು. ಪತ್ರದಲ್ಲಿ ‘ನಾನು ಹಲವಾರು ಭಯೋತ್ಪಾದಕ ಸಂಘಟನೆಗಳಿಗೆ ಧನಸಹಾಯ ಮಾಡುತ್ತಿದ್ದೇನೆ. ಕೆಲ ಧರ್ಮಗಳ ಜನರನ್ನು ದೇಶದಿಂದ ನಿರ್ನಾಮ ಮಾಡಲು ಪ್ರಯತ್ನಿಸುತ್ತಿದ್ದೇನೆ. ಅದರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೂ ಇದ್ದಾರೆ. ಭಾರತದ ವಿವಿಧೆಡೆ ಬಾಂಬ್ ಸ್ಫೋಟಗಳನ್ನು ನಡೆಸಲಾಗುವುದು’ ಎಂದು ಆ ಮೇಲ್​​ನಲ್ಲಿ ಬರೆಯಲಾಗಿತ್ತು. ಇನ್ನು ಈ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಸಚಿವಾಲಯಕ್ಕೂ ಬಂದಿತ್ತು ಬೆದರಿಕೆ: ಮುಂಬೈಯಲ್ಲಿನ ಸಚಿವಾಲಯದಲ್ಲಿ ಬಾಂಬ್​ ಇಟ್ಟಿರುವುದಾಗಿ ವ್ಯಕ್ತಿಯೊಬ್ಬ ರಾತ್ರಿ 10 ಗಂಟೆಗೆ ಕರೆ ಮಾಡಿ ಮಾಹಿತಿ ನೀಡಿದ್ದ. ತಕ್ಷಣವೇ ಪೊಲೀಸರಿಗೆ ಮಾಹಿತಿ ಸಿಕ್ಕ ಬಳಿಕ ಕಾರ್ಯಾಚರಣೆ ನಡೆಸಲಾಗಿದ್ದು, 61 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿತ್ತು.

Comments (0)
Add Comment