ಜಿ-20 ಶೃಂಗಸಭೆ: ಮೋದಿ ಮುಂದೆ ಇಂಡಿಯಾ ಬದಲು ಭಾರತ ನಾಮಫಲಕ

ನವದೆಹಲಿ, ಸೆ 09 (DaijiworldNews/MS): ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇಂದಿನಿಂದ ಎರಡು ದಿನಗಳ ಜಿ-20 ಶೃಂಗಸಭೆ ಆರಂಭವಾಗಿದೆ. ಮಹತ್ವದ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಆಸನದ ಮುಂದಿದ್ದ ನಾಮಫಲಕದಲ್ಲಿ ‘ಭಾರತ್’ ಎಂದು ಬರೆದಿರುವುದು ಈಗ ದೇಶದ ಗಮನ ಸೆಳೆದಿದೆ.

ಜಿ-20 ಅಧ್ಯಕ್ಷತೆವನ್ನು ಭಾರತ ವಹಿಸಿದ್ದು, ದೆಹಲಿಯ ‘ಭಾರತ್’ ಮಂಟಪದಲ್ಲಿ ವಾರ್ಷಿಕ ಶೃಂಗಸಭೆ ನಡೆಯುತ್ತಿದೆ. ಈ ಸಭೆಯನ್ನು ಉದ್ದೇಶಿಸಿ ಆರಂಭಿಕ ಮಾತುಗಳನ್ನಾಡಿದ ಪ್ರಧಾನಿ ಮೋದಿ ಅವರ ಮುಂಭಾಗದಲ್ಲಿ ‘ಭಾರತ’ ಹೆಸರಿನ ಪ್ರದರ್ಶನ ಮಾಡಲಾಗಿದೆ.

ಕೆಲ ದಿನಗಳ ಹಿಂದೆ ಜಿ20 ನಿಮಿತ್ತ ಗಣ್ಯರಿಗೆ ರಾಷ್ಟ್ರಪತಿಗಳು ಇಂದು ರಾತ್ರಿ ಏರ್ಪಡಿಸಿರುವ ಔತಣಕೂಟದ ಆಹ್ವಾನ ಹೋಗಿದ್ದು, ಅದರಲ್ಲಿ ʼಪ್ರೆಸಿಡೆಂಟ್‌ ಆಫ್‌ ಭಾರತʼ ಎಂದು ಅಚ್ಚು ಹಾಕಿಸಲಾಗಿತ್ತು. ಇದಾದ ಬಳಿಕ ʼಇಂಡಿಯಾʼ – ಭಾರತ್ ವಿಚಾರವಾಗಿ ಸಾಕಷ್ಟು ಚರ್ಚೆ ಹುಟ್ಟುಹಾಕಿತ್ತು.

ವಿಪಕ್ಷ ಒಕ್ಕೂಟವು ʼಇಂಡಿಯಾʼ ಎಂದು ಹೆಸರಿಟ್ಟುಕೊಂಡ ಬಳಿಕ ಆತಂಕಗೊಂಡಿರುವ ಮೋದಿ ಸರ್ಕಾರ, ಇಂಡಿಯಾ ಬದಲು ಭಾರತ ಎಂದು ಬಳಸಲು ಮುಂದಾಗಿದೆ ಎಂದು ವಿಪಕ್ಷಗಳು ಟೀಕಿಸಿತ್ತು.

Comments (0)
Add Comment