‘ಡಾಕ್ಟರೇಟ್ ಮಾರಾಟ ಅಸಹ್ಯ ತಂದಿದೆ, ನನ್ನ ಹೆಸರಿನ ಮುಂದೆ ‘ಡಾ’ ಬೇಡ’ – ಹೊಸದುರ್ಗ ಕುಂಚಿಟಿಗ ಶ್ರೀ

ಇನ್ಮುಂದೆ ತಮ್ಮ ಹೆಸರಿನ ಮುಂದೆ “ಡಾ” ಎಂದು ಬಳಸದಂತೆ ಕುಂಚಿಟಿಗ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ಶಾಂತವೀರ ಸ್ವಾಮೀಜಿ ,ಮಠದ ಭಕ್ತರಿಗೆ, ಮಾಧ್ಯಮಗಳಿಗೆ ಮತ್ತು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ಹೇಳಿಕೆ ನೀಡಿರುವ ಅವರು, “ಇತ್ತೀಚಿಗೆ ಗೌರವ ಡಾಕ್ಟರೇಟ್ ಎನ್ನುವುದು ವ್ಯಾಪಾರೀಕರಣವಾಗಿದೆ. ದುಡ್ಡಿನ ಆಸೆಗಾಗಿ ಪ್ರಬಲರಿಗೆ ಹಾಗೂ ಹಣವಂತರಿಗೆ ಡಾಕ್ಟರೇಟ್ ಪದವಿಯನ್ನು ನೀಡುತ್ತಿದ್ದಾರೆ. ಜೊತೆಗೆ ಹಣವಂತರು ದುಡ್ಡು ಕೊಟ್ಟು ಡಾಕ್ಟರೇಟ್‌ ಪದವಿ ಪಡೆಯುತ್ತಿರುವುದು ಅಸಹ್ಯ ತಂದಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ಇತ್ತೀಚಿನ ದಿನಗಳಲ್ಲಿ ಬೀದಿ ಬದಿಯ ತರಕಾರಿ ವ್ಯಾಪಾರದಂತೆ ಗೌರವ ಡಾಕ್ಟರೇಟ್ ಪದವಿಗಳನ್ನು 10, 20 ಸಾವಿರಕ್ಕೆ ಮಾರಾಟ ಮಾಡಿಕೊಳ್ಳಲಾಗುತ್ತಿದೆ. ದುರ್ಬಲರು, ಶ್ರೀಮಂತರು ದುಡ್ಡು ಕೊಟ್ಟು ಡಾಕ್ಟರೇಟ್ ಪದವಿ ಪಡೆದು ಪ್ರತಿಷ್ಠೆ ತೋರಿಸುತ್ತಾರೆ. ಮಠಾಧೀಶರನ್ನು ಸಹ ಬಿಟ್ಟಿಲ್ಲ ಇಂತಹ ನಕಲಿಗಳಿಂದ ಅಸಲಿ, ಸಮರ್ಥರು, ಅರ್ಹರಿಗೆ ಆಗೌರವ ತರುವಂತಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಹೀಗಾಗಿ ನನಗೆ ನೀಡಿದ ಡಾಕ್ಟರೇಟ್ ಪದವಿಯನ್ನು ತಿರಸ್ಕರಿಸಲಾಗಿದೆ ಎಂದರು. ಅಲ್ಲದೇ ಡಾಕ್ಟರೇಟ್ ಪದವಿ ನೀಡುವುದಾಗಿ ಎರಡು ದೇಶಗಳಿಂದ ಬಂದಿರುವ ಮನವಿಯನ್ನು ಸ್ವೀಕರಿಸುವುದಿಲ್ಲ ಎಂದು ಶ್ರೀಗಳು ಸ್ಪಷ್ಟಪಡಿಸಿದ್ದಾರೆ.

2018ರಲ್ಲಿ ಗೌಡಾಶ್ರೀ ಶಾಂತವೀರ ಸ್ವಾಮೀಜಿಯವರ ಕೃಷಿ ಮತ್ತು ಸಮಾಜ ಸೇವೆಯನ್ನು ಗುರುತಿಸಿ, ಈ ಹಿಂದೆ 2018 ಮತ್ತು 2019ನೇ ಸಾಲಿನಲ್ಲಿ ಡಾಕ್ಟರೇಟ್ ಪದವಿಯನ್ನು ಮೈಸೂರಿನಲ್ಲಿ ನೀಡಿ ಗೌರವಿಸಲಾಗಿತ್ತು. ಆ ಬಳಿಕ ಶ್ರೀಗಳನ್ನು ಎಲ್ಲೆಡೆ ಉಲ್ಲೇಖಿಸುವಾಗ ಹೆಸರಿನಲ್ಲಿ ಡಾ. ಶಾಂತವೀರ ಸ್ವಾಮೀಜಿ ಎಂದು ಸೇರಿಸಲಾಗಿತ್ತು. ಆದರೆ ಇದೀಗ ಶ್ರೀಗಳು ಈ ರೀತಿ ಸೇರಿಸುವುದು ಬೇಡ ಎಂದು ತಿಳಿಸಿದ್ದಾರೆ. ಅಲ್ಲದೇ ತನಗೆ ಬಂದ ಗೌರವ ಡಾಕ್ಟರೇಟ್ ಪದವಿಗಳನ್ನು ನಯವಾಗಿ ತಿರಸ್ಕರಿಸಿರುವುದಾಗಿ ಹೇಳಿದ್ದಾರೆ.

Comments (0)
Add Comment