ನಮ್ಮನ್ನು ಏನೂ ಬೇಕಾದ್ರೂ ಕರೆಯಿರಿ, ನಾವು ಎಂದಿಗೂ ‘ಇಂಡಿಯಾ’ ಎಂದು ಮೋದಿಗೆ ತಿರುಗೇಟು ನೀಡಿದ ರಾಹುಲ್ ಗಾಂಧಿ

ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಇಂದು ಬಿಜೆಪಿ ಸಂಸದರ ಸಭೆಯಲ್ಲಿ ಪ್ರತಿಪಕ್ಷಗಳ ‘ಇಂಡಿಯಾ’ ಮೈತ್ರಿಕೂಟದ ಬಗ್ಗೆ ಟೀಕಿಸಿದ್ದಾರೆ. ವಿರೋಧ ಪಕ್ಷಗಳ ಮೈತ್ರಿಕೂಟವು ದೇಶದಲ್ಲಿ ದಿಕ್ಕು ತೋಚದಂತಿದೆ. ದೇಶದ ಹೆಸರಲ್ಲಿ ಜನರ ದಿಕ್ಕು ತಪ್ಪಿಸಲು ಪ್ರಯತ್ನ ಮಾಡುತ್ತಿದೆ. ಈ ಸಮಯದಲ್ಲಿ ಈಸ್ಟ್ ಇಂಡಿಯಾ ಕಂಪನಿ ಮತ್ತು ಭಯೋತ್ಪಾದಕ ಸಂಘಟನೆ ಇಂಡಿಯನ್ ಮುಜಾಹಿದ್ದೀನ್ ಮತ್ತು ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದಲ್ಲೂ ‘ಇಂಡಿಯಾ’ ಇದೆ ಎಂದು ಈ ಸಭೆಯಲ್ಲಿ ಹೇಳಿದ್ದಾರೆ.

ಇದಕ್ಕೆ ರಾಹುಲ್​​ ಗಾಂಧಿ ಅವರು ಟ್ವೀಟ್​​ ಮೂಲಕ ಟಾಂಗ್ ನೀಡಿದ್ದಾರೆ. ಅದು ಹೀಗಿದೆ.
‘ಮಿಸ್ಟರ್ ಮೋದಿ ನಮ್ಮನ್ನು ನೀವು ಏನು ಬೇಕಾದರೂ ಕರೆಯಬಹುದು. ನಾವು ಎಂದಿಗೂ INDIA. ಮಣಿಪುರವನ್ನು ಮತ್ತೆ ಮೊದಲಿನ ಸ್ಥಿತಿಗೆ ತರವುದು ನಮ್ಮ ಗುರಿ. ಅಲ್ಲಿಯ ಮಕ್ಕಳು ಮತ್ತು ಮಹಿಳೆಯರ ಕಣ್ಣೀರನ್ನು ಒರೆಸಲು ಸಹಾಯ ಮಾಡುತ್ತೇವೆ. ಎಲ್ಲ ಜನರಿಗೂ ನಾವು ಪ್ರೀತಿ ಮತ್ತು ಶಾಂತಿಯನ್ನು ಮತ್ತೆ ನೀಡುತ್ತೇವೆ. ಮಣಿಪುರದಲ್ಲಿ ಮತ್ತೆ ಭಾರತದ ಕಲ್ಪನೆಯನ್ನು ಮರುನಿರ್ಮಾಣ ಮಾಡುತ್ತೇವೆ’ ಎಂದು ರಾಹುಲ್​​ ಗಾಂಧಿ ಟ್ವೀಟ್​​ ಮಾಡಿದ್ದಾರೆ.

ಪ್ರಧಾನಿ ಮೋದಿ ಬಿಜೆಪಿ ಸಂಸದೀಯ ಸಭೆಯಲ್ಲಿ, ಈ ರೀತಿ ದಿಕ್ಕುದಿಸೆಯಿಲ್ಲದ ವಿರೋಧವನ್ನು ನಾನು ಎಂದು ಕಂಡಿರಲಿಲ್ಲ. ಕೇವಲ ದೇಶದ ಹೆಸರನ್ನು ಬಳಸಿಕೊಂಡು ಭಾರತದ ದಿಕ್ಕುತಪ್ಪಿಸಲು ಸಾಧ್ಯವಿಲ್ಲ ಎಂದು ಹೇಳಿದ್ದರು.

ಮಣಿಪುರದಲ್ಲಿ ನಡೆದ ಹಿಂಸಾಚಾರದಿಂದ ದೇಶದ್ಯಾಂತ ಭಾರೀ ಆಕ್ರೋಶ ವ್ಯಕ್ತವಾಗಿದೆ. ಇನ್ನೂ ಉರಿಯುತ್ತಿರುವ ಬೆಂಕಿಗೆ ತುಪ್ಪು ಸುರಿದಂತೆ, ಮೇ 4ರಂದು ಚಿತ್ರಿಸಲಾಗಿದ್ದ ಇಬ್ಬರು ಮಹಿಳೆಯರ ಬೆತ್ತಲೆ ಮೆರವಣಿಗೆ ಮಾಡಿರುವ ವಿಡಿಯೋ ಇತ್ತಿಚೇಗೆ ವೈರಲ್​​ ಆಗಿರುವುದು ಈ ಆಕ್ರೋಶವನ್ನು ಮತ್ತಷ್ಟು ಹೆಚ್ಚಿಸಿದೆ. ಈ ಬಗ್ಗೆ ಮುಂಗಾರು ಅಧಿವೇಶನದಲ್ಲಿ ಚರ್ಚೆಯಾಗಬೇಕು ಎಂದು ವಿರೋಧ ಪಕ್ಷಗಳ ಒತ್ತಾಯಕ್ಕೆ ಮಣಿದು, ಕೇಂದ್ರ ಸರ್ಕಾರ ಚರ್ಚೆ ಒಪ್ಪಿಗೆ ನೀಡಿತ್ತು. ಆದರೆ ಇದೀಗ ವಿರೋಧ ಪಕ್ಷಗಳು ಮಣಿಪುರ ಹಿಂಸಾಚಾರದ ಬಗ್ಗೆ ಪ್ರಧಾನಿ ಮೋದಿ ಅವರೇ ನೇರವಾಗಿ ಉತ್ತರ ನೀಡಬೇಕು ಎಂದು ವಿರೋಧ ಪಕ್ಷಗಳು ಒತ್ತಾಯ ಮಾಡುತ್ತಿದೆ.

ಇನ್ನೂ ಮೋದಿ ಉಪನಾಮಕ್ಕೆ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ ಸಂಸದ ಸ್ಥಾನದಿಂದ ಅನರ್ಹಗೊಂಡಿರುವ ರಾಹುಲ್​​ ಗಾಂಧಿ ಅವರು ಪ್ರಧಾನಿ ಮೋದಿ ಅವರ ಈ ಹೇಳಿಕೆಗೆ ಟ್ವಿಟರ್​​ ಮೂಲಕ ತರಾಟೆಗೆ ತೆಗೆದುಕೊಂಡಿದ್ದಾರೆ.

Comments (0)
Add Comment