ನುಹ್ ಕೋಮು ಘರ್ಷಣೆಯಲ್ಲಿ 6 ಸಾವು, ಇದುವರೆಗೆ 116 ಬಂಧನ: ಹರಿಯಾಣ ಸಿಎಂ

ಗುರುಗ್ರಾಮ್: ನುಹ್‌ನಲ್ಲಿ ನಡೆದ ಕೋಮು ಘರ್ಷಣೆಯಲ್ಲಿ ಇಬ್ಬರು ಗೃಹ ರಕ್ಷಕರು ಸೇರಿದಂತೆ ಆರು ಮಂದಿ ಪ್ರಾಣ ಕಳೆದುಕೊಂಡಿದ್ದು, ಇದುವರೆಗೆ 116 ಜನರನ್ನು ಬಂಧಿಸಲಾಗಿದೆ. ಈ ಸಂಘರ್ಷದಲ್ಲಿ 70 ಜನರು ಗಾಯಗೊಂಡಿದ್ದಾರೆ ಎಂದು ಹರಿಯಾಣ ಸಿಎಂ ಎಂಎಲ್ ಖಟ್ಟರ್ ಹೇಳಿದ್ದಾರೆ. “ತಪ್ಪಿತಸ್ಥರನ್ನು ಬಿಡಲಾಗುವುದಿಲ್ಲ. ನಾವು ಸಾರ್ವಜನಿಕರ ಸುರಕ್ಷತೆಗೆ ಬದ್ಧರಾಗಿದ್ದೇವೆ. ರಾಜ್ಯದಲ್ಲಿ ಒಟ್ಟಾರೆ ಪರಿಸ್ಥಿತಿ ಸಹಜವಾಗಿದೆ’ ಎಂದು ಹರಿಯಾಣ ಸಿಎಂ ಎಂಎಲ್ ಖಟ್ಟರ್ ತಿಳಿಸಿದ್ದಾರೆ. ದೆಹಲಿಯಿಂದ ಕೇವಲ 50 ಕಿಮೀ ದೂರದಲ್ಲಿರುವ ನುಹ್‌ನಲ್ಲಿ ನಿನ್ನೆ ನಡೆದ ಧಾರ್ಮಿಕ ಮೆರವಣಿಗೆಯಲ್ಲಿ ಹಿಂಸಾಚಾರ ಸಂಭವಿಸಿದೆ. ಆಕ್ಷೇಪಾರ್ಹ ವೀಡಿಯೊ ವೈರಲ್ ಆಗಿದ್ದೆ ಘರ್ಷಣೆಗೆ ಕಾರಣ ಎಂದು ಹೇಳಲಾಗುತ್ತಿದೆ. ಗುಂಪೊಂದು ಮೆರವಣಿಗೆಯ ಮೇಲೆ ಕಲ್ಲುಗಳಿಂದ ದಾಳಿ ಮಾಡುತ್ತಿದ್ದಂತೆ, 2,500-ಕ್ಕೂ ಹೆಚ್ಚು ಜನ ಆಶ್ರಯ ಪಡೆಯಲು ದೇವಸ್ಥಾನಕ್ಕೆ ನುಗ್ಗಿದರು. ಸಂಜೆಯಾಗುತ್ತಿದ್ದಂತೆ ಹಿಂಸಾಚಾರವು ಉಲ್ಬಣಗೊಂಡಿತು. ಮಧ್ಯರಾತ್ರಿಯ ನಂತರ ಮಸೀದಿಗೆ ಬೆಂಕಿ ಹಚ್ಚಲಾಯಿತು. ನೂರಕ್ಕೂ ಹೆಚ್ಚು ವಾಹನಗಳನ್ನು ಸುಟ್ಟುಹಾಕಲಾಯಿತು ಮತ್ತು ಧ್ವಂಸಗೊಳಿಸಲಾಯಿತು. ಜನಸಮೂಹವು ನುಹ್ ಮತ್ತು ನೆರೆಯ ಗುರುಗ್ರಾಮ್‌ನಲ್ಲಿ ದಾಳಿ ನಡೆಸಿತು. ಸತ್ತವರಲ್ಲಿ ಇಬ್ಬರು ಭದ್ರತಾ ಸಿಬ್ಬಂದಿ ಮತ್ತು ಇಬ್ಬರು ನಾಗರಿಕರು ಸೇರಿದ್ದಾರೆ, ಅವರಲ್ಲಿ ಒಬ್ಬರು ಮಸೀದಿಯ ಧರ್ಮಗುರು ಎನ್ನಲಾಗಿದೆ.

Comments (0)
Add Comment