ಪಾಕಿಸ್ತಾನದಲ್ಲಿ ಉಗ್ರರ ದಾಳಿ.. ಒಂದೇ ತಿಂಗಳಲ್ಲಿ 99 ಅಟ್ಯಾಕ್​, 122 ಮಂದಿ ಸಾವು..!

ಇಸ್ಲಾಮಾಬಾದ್ (ಪಾಕಿಸ್ತಾನ) : ಭಯೋತ್ಪಾದನೆ ಬೆಂಕಿಯಲ್ಲಿ ಬೇಯುತ್ತಿರುವ ಪಾಕಿಸ್ತಾನ ಈ ವರ್ಷದ ಆಗಸ್ಟ್​ ತಿಂಗಳಲ್ಲಿ 99 ಭಯೋತ್ಪಾದಕ ದಾಳಿಗಳಿಗೆ ಒಳಗಾಗಿದೆ.

ಇದರಲ್ಲಿ 112 ಸಾವು, 87 ಮಂದಿ ಗಾಯಗೊಂಡಿದ್ದಾಗಿ ವರದಿಯೊಂದು ತಿಳಿಸಿದೆ. ಇದು 2014ರ ನಂತರದಲ್ಲಿ ಇತ್ತೀಚಿನ ಒಂದೇ ತಿಂಗಳಲ್ಲಿ ನಡೆದ ಅತ್ಯಧಿಕ ಭಯೋತ್ಪಾದನೆ ದಾಳಿಗಳಾಗಿವೆ.

ಪಾಕಿಸ್ತಾನದ ಸಂಘರ್ಷ ಮತ್ತು ಭದ್ರತಾ ಅಧ್ಯಯನ ಸಂಸ್ಥೆ ಸಮೀಕ್ಷೆ ನಡೆಸಿದ್ದು, ದೇಶದಲ್ಲಿ ಕಳೆದ ತಿಂಗಳು ಅತಿ ಹೆಚ್ಚು ಟೆರಿರಿಸ್ಟ್​ ದಾಳಿಗಳು ನಡೆದಿವೆ ಎಂದು ಹೇಳಿದೆ. ಇದರಲ್ಲಿ ಭದ್ರತಾ ಸಿಬ್ಬಂದಿ ಮತ್ತು ನಾಗರಿಕರು ಸೇರಿ 112 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಆರ್ಥಿಕ ಸಂಕಷ್ಟದಿಂದ ಬಳಲುತ್ತಿರುವ ದೇಶಕ್ಕೆ ಇದು ಗಾಯದ ಮೇಲೆ ಬರೆ ಎಳೆದಂತಾಗಿದೆ.

ಮಾಹಿತಿಯ ಪ್ರಕಾರ, ಜುಲೈ ತಿಂಗಳಿಗೆ ಹೋಲಿಸಿದರೆ ಆಗಸ್ಟ್‌ನಲ್ಲಿ 83 ಪ್ರತಿಶತದಷ್ಟು ದಾಳಿಗಳು ಏರಿಕೆಯಾಗಿವೆ. ಜುಲೈ ತಿಂಗಳಿನಲ್ಲಿ 54 ಭಯೋತ್ಪಾದನೆ ದಾಳಿಗಳು ನಡೆದಿವೆ. ಇದರಲ್ಲಿ ನಾಲ್ಕು ಆತ್ಮಹತ್ಯಾ ದಾಳಿಗಳೂ ಇವೆ. ಖೈಬರ್ ಪಖ್ತುಂಖ್ವಾದ ಬುಡಕಟ್ಟು ಜಿಲ್ಲೆಗಳಲ್ಲಿ ಮೂರು ದಾಳಿಗಳಾಗಿದ್ದರೆ, ಪ್ರಮುಖ ಪ್ರದೇಶದಲ್ಲಿ ಒಂದು ಟೆರಿರಿಸ್ಟ್​ ಅಟ್ಯಾಕ್​ ಆಗಿದೆ.

ಆತ್ಮಹತ್ಯಾ ದಾಳಿಯಲ್ಲೂ ದಾಖಲೆ: ಇದೇ ವೇಳೆ ಜುಲೈ ತಿಂಗಳಲ್ಲಿ ಪ್ರತ್ಯೇಕವಾಗಿ ಐದು ಆತ್ಮಹತ್ಯಾ ದಾಳಿಗಳು ನಡೆದಿವೆ. ಇದು ಯಾವುದೇ ವರ್ಷದ ತಿಂಗಳೊಂದರಲ್ಲಿ ಆದ ಅತಿ ಹೆಚ್ಚು ನಡೆದ ಸೂಸೈಡ್​ ಅಟ್ಯಾಕ್​ ಆಗಿವೆ. 2023 ರ ಮೊದಲ ಎಂಟು ತಿಂಗಳಲ್ಲಿ ದೇಶದಲ್ಲಿ 22 ಆತ್ಮಹತ್ಯಾ ದಾಳಿಗಳು ವರದಿಯಾಗಿವೆ. ಇದರಲ್ಲಿ 227 ಜನರು ದಾರುಣವಾಗಿ ಸಾವನ್ನಪ್ಪಿದ್ದಾರೆ. 497 ಜನರು ಗಾಯಗೊಂಡಿದ್ದಾರೆ ಎಂದು ವರದಿ ಹೇಳಿದೆ.

ಆಗಸ್ಟ್‌ನಲ್ಲಿ ನಡೆದ ಉಗ್ರ ದಾಳಿಗಳಲ್ಲಿ ಬಲೂಚಿಸ್ತಾನ್ ಮತ್ತು ಫೆಡರಲ್ ಆಡಳಿತದ ಬುಡಕಟ್ಟು ಪ್ರದೇಶಗಳು (ಎಫ್‌ಎಟಿಎ) ಅತಿ ಹೆಚ್ಚು ಹಾನಿಗೊಳಗಾದ ಪ್ರದೇಶಗಳಾಗಿವೆ. ಬಲೂಚಿಸ್ತಾನದಲ್ಲಿ ಶೇಕಡಾ 65 ರಷ್ಟು ಉಗ್ರ ದಾಳಿ ಹೆಚ್ಚಳವಾಗಿದ್ದರೆ, ಫೆಡರಲ್​ ಪ್ರದೇಶದಲ್ಲಿ ಶೇ 106 ರಷ್ಟು ದಾಳಿಗಳು ಅಧಿಕವಾಗಿವೆ. ಇವೆಲ್ಲವೂ ಜುಲೈ 17 ರಿಂದ ಆಗಸ್ಟ್‌ 28 ರ ನಡುವೆ ನಡೆದಿವೆ. ಎರಡೂ ಪ್ರದೇಶಗಳಲ್ಲಿ ಕ್ರಮವಾಗಿ ಶೇ 19 ರಷ್ಟು ಮತ್ತು ಶೇ 29 ರಷ್ಟು ಸಾವುನೋವುಗಳಾಗಿವೆ.

ಜುಲೈನಲ್ಲಿ ಅತಿಹೆಚ್ಚು ಸಾವು: ಖೈಬರ್ ಪಖ್ತುಂಖ್ವಾದ ಬುಡಕಟ್ಟು ಜಿಲ್ಲೆಗಳಲ್ಲಿ ಉಗ್ರಗಾಮಿಗಳ ದಾಳಿಯಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದೆ. ಜುಲೈ 15 ರಿಂದ ಆಗಸ್ಟ್‌ನಲ್ಲಿ 29 ರ ನಡುವೆ ಶೇ 83 ರಷ್ಟು ದಾಳಿಗಳಾಗಿವೆ. ಇದರಲ್ಲಿ ಸಾವು ನೋವುಗಳು ಏರಿಕೆಯಾಗಿವೆ. ಜುಲೈನಲ್ಲಿ ಶೇ 188 ರಷ್ಟು ಸಾವಾಗಿದ್ದರೆ, ಆಗಸ್ಟ್​ನಲ್ಲಿ ಶೇ 73 ರಷ್ಟು ಸಾವು ಹೆಚ್ಚಾಗಿದೆ ಎಂದು ವರದಿಯಲ್ಲಿದೆ.

ಈ ಪ್ರಾಂತ್ಯಗಳಲ್ಲಿ ತೆಹ್ರಿಕ್ ಇ ತಾಲಿಬಾನ್​ ಪಾಕಿಸ್ತಾನ್​ ಮತ್ತು ಅದರ ಗುಂಪುಗಳ ದಾಳಿಗಳು ಹೆಚ್ಚಾಗಿವೆ. ಹಲವಾರು ದಾಳಿಗಳ ಹೊಣೆಯನ್ನೂ ಸಂಘಟನೆಗಳು ಹೊತ್ತುಕೊಂಡಿವೆ. ಇದರ ಜೊತೆಗೆ ಸಿಂಧ್ ಪ್ರಾಂತ್ಯವೂ ಕೂಡ ಉಗ್ರಗಾಮಿಗಳ ದಾಳಿಯಲ್ಲಿ ಸ್ವಲ್ಪ ಹೆಚ್ಚಳ ಕಂಡಿದೆ. ಜುಲೈ 3 ರಿಂದ ಆಗಸ್ಟ್​ 4 ರ ನಡುವೆ 4 ಉಗ್ರ ದಾಳಿಗಳು ನಡೆದಿವೆ.

Comments (0)
Add Comment