ಪಾಕ್‌ನ ಬಲೂಚಿಸ್ತಾನದಲ್ಲಿ ನೆಲಬಾಂಬ್ ಸ್ಫೋಟ – ಯೂನಿಯನ್ ಕೌನ್ಸಿಲ್ ಮುಖ್ಯಸ್ಥ ಸೇರಿದಂತೆ 7 ಮಂದಿ ಸಾವು

ಇಸ್ಲಾಮಾಬಾದ್‌: ಪಾಕಿಸ್ತಾನದ ಬಲೂಚಿಸ್ತಾನದಲ್ಲಿ ಸೋಮವಾರ ರಾತ್ರಿ ಸಂಭವಿಸಿದ ನೆಲಬಾಂಬ್ ಸ್ಫೋಟದಲ್ಲಿ ಯೂನಿಯನ್ ಕೌನ್ಸಿಲ್ (ಯುಸಿ) ಅಧ್ಯಕ್ಷ ಸೇರಿದಂತೆ ಕನಿಷ್ಠ ಏಳು ಜನರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಾನೂನುಬಾಹಿರ ಬಲೂಚ್ ಲಿಬರೇಶನ್ ಫ್ರಂಟ್ ಕೈವಾಡವಿದೆ ಎಂದು ಎಕ್ಸ್‍ಪ್ರೆಸ್ ಟ್ರಿಬ್ಯೂನ್ ವರದಿ ಮಾಡಿದೆ. ಬಲೂಚಿಸ್ತಾನದ ಪಂಜ್ಗುರ್ ಜಿಲ್ಲೆಯಲ್ಲಿ ವಾಹನವನ್ನು ಗುರಿಯಾಗಿಸಿಕೊಂಡು ನೆಲಬಾಂಬ್ ದಾಳಿ ನಡೆಸಲಾಗಿದೆ. ಬಲ್ಗತಾರ್ ಪ್ರದೇಶದ ಚಕರ್ ಬಜಾರ್‌ಗೆ ಯುನಿಯನ್ ಕೌನ್ಸಿಲ್ ಮುಖ್ಯಸ್ಥ ಇಶ್ತಿಯಾಕ್ ಯಾಕೂಬ್ ಮತ್ತು ಇತರರು ಇದ್ದ ವಾಹನ ಬಂದು ನಿಲ್ಲುತ್ತಿದ್ದಂತೆ ಬಾಂಬ್ ಸ್ಫೋಟಗೊಂಡಿದೆ. ಹತ್ಯೆಯಾದವರನ್ನು ಮೊಹಮ್ಮದ್ ಯಾಕೂಬ್, ಇಬ್ರಾಹಿಂ, ವಾಜಿದ್, ಫಿದಾ ಹುಸೇನ್, ಸರ್ಫರಾಜ್ ಮತ್ತು ಹೈದರ್ ಎಂದು ಗುರುತಿಸಲಾಗಿದೆ. ಇವರೆಲ್ಲರೂ ಬಲ್ಗತಾರ್ ಹಾಗೂ ಪಂಜ್ಗುರ್ ನಿವಾಸಿಗಳು. ಮೃತರಲ್ಲಿ ನಾಲ್ವರ ಗುರುತನ್ನು ತಕ್ಷಣಕ್ಕೆ ಪತ್ತೆಹಚ್ಚಲು ಸಾಧ್ಯವಾಗಿರಲಿಲ್ಲ. ಬಳಿಕ ಮೃತರ ಕುಟುಂಬಸ್ಥರು ಆಸ್ಪತ್ರೆ ತಲುಪಿದಾಗ ಮೃತದೇಹಗಳನ್ನು ಗುರುತಿಸಲಾಗಿದೆ.

Comments (0)
Add Comment