‘ಪಾಕ್ ಆಕ್ರಮಿತ ಕಾಶ್ಮೀರ ಶೀಘ್ರದಲ್ಲೇ ಭಾರತದೊಂದಿಗೆ ವಿಲೀನವಾಗಲಿದೆ’ – ವಿಕೆ ಸಿಂಗ್

ನವದೆಹಲಿ: ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ) ಶೀಘ್ರದಲ್ಲೇ ಭಾರತದೊಂದಿಗೆ “ಸ್ವಯಂ” ಆಗಿ ವಿಲೀನಗೊಳ್ಳಲಿದೆ ಎಂದು ಕೇಂದ್ರ ಸಚಿವ ಮತ್ತು ಮಾಜಿ ಸೇನಾ ಮುಖ್ಯಸ್ಥ ವಿಕೆ ಸಿಂಗ್ ಸೋಮವಾರ ಹೇಳಿದ್ದಾರೆ. ಇದೀಗ ಈ ಸುದ್ದಿ ದೇಶದೊಳಗೆ ಭಾರೀ ಚರ್ಚೆ ಕಾರಣವಾಗಿದೆ.

ಭಾನುವಾರ ದೌಸಾದಲ್ಲಿ ಬಿಜೆಪಿಯ ಪರಿವರ್ತನ ಸಂಕಲ್ಪ ಯಾತ್ರೆಯ ನೇಪಥ್ಯದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಪಿಒಕೆಯನ್ನು ಭಾರತದೊಂದಿಗೆ ವಿಲೀನಗೊಳಿಸಬೇಕು ಎಂಬ ನಿಮ್ಮ ಈ ಮಾತಿಗೆ, ಬಿಜೆಪಿಯ ನಿಲುವು ಏನು? ಜತೆಗೆ ಪಿಒಕೆಯಲ್ಲಿನ ಜನರ ಬೇಡಿಕೆಗಳೇನು? ಎಂಬ ಮಾಧ್ಯಮಗಳ ಪ್ರಶ್ನೆಗೆ ವಿಕೆ ಸಿಂಗ್​​ ಈ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ.“ಪಿಒಕೆ ತನ್ನದೇ ಆದ ಮೇಲೆ ಭಾರತದೊಂದಿಗೆ ವಿಲೀನಗೊಳ್ಳುತ್ತದೆ. ಸ್ವಲ್ಪ ಸಮಯ ಕಾಯಿರಿ ” ಎಂದು ಹೇಳಿದ್ದಾರೆ.

ಪಿಒಕೆ ಭಾರತದ ಅವಿಭಾಜ್ಯ ಅಂಗವಾಗಿದೆ ಎಂದು ಕೇಂದ್ರ ಸರ್ಕಾರ ಯಾವಾಗಲೂ ಸಮರ್ಥಿಸಿಕೊಂಡಿದೆ. ಇನ್ನು ಮೇ ತಿಂಗಳಲ್ಲಿ ಗೋವಾದಲ್ಲಿ ನಡೆದ ಸಿಇಒ ಶೃಂಗಸಭೆಯಲ್ಲಿ ವಿದೇಶಾಂಗ ಸಚಿವ ಎಸ್​​​ ಜೈಶಂಕರ್​​ ಅವರು ಪಾಕ್​​ ಸರ್ಕಾರ ಭಯೋತ್ಪಾದನೆಗೆ ಬೆಂಬಲ ನೀಡುತ್ತಿದೆ ಎಂದು ಆಗಿನ ಪಾಕಿಸ್ತಾನದ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಮುಂದೆ ತರಾಟೆಗೆ ತೆಗೆದುಕೊಂಡಿದ್ದರು. ಈ ಸಭೆಯಲ್ಲೂ ಪಿಒಕೆ ಭಾರತದ ನಿರ್ಧಾರ ಮತ್ತು ನಿಲುವು ಏನು ಎಂಬುದನ್ನು ಕೂಡ ಸ್ಪಷ್ಟವಾಗಿ ತಿಳಿಸಿದ್ದರು.

ಹಿಂದುತ್ವದ ಕುರಿತು ಇತ್ತೀಚೆಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, “ಭಾರತದಲ್ಲಿ ಪ್ಯಾಂಟ್ ಮತ್ತು ಶರ್ಟ್ ಹಾಕುವ ವ್ಯಕ್ತಿ, ವಿದೇಶ ಪ್ರವಾಸ ಮಾಡುವಾಗ ಕುರ್ತಾ-ಪೈಜಾಮಾ ಧರಿಸುವ ಬಗ್ಗೆ ಏನು ಹೇಳಬಹುದು? ಕೈಲಾಸ ಮಾನಸ ಸರೋವರ ಯಾತ್ರೆಯನ್ನು ಪ್ರಾರಂಭಿಸುವ ಮೊದಲು, ಪವಿತ್ರ ದಾರ ಕಟ್ಟಿ , ದೇವಾಲಯಕ್ಕೆ ಭೇಟಿ ನೀಡಿ, ಗಂಟೆ ಬಾರಿಸಿದರು ಬಳಿಕ ಮಾಂಸವನ್ನು ಸೇವಿಸಿದರು. ಈ ಪರಿಸ್ಥಿತಿಯಲ್ಲಿ ಅವರ ಬಗ್ಗೆ ಏನನ್ನೂ ಹೇಳಲಾಗುವುದಿಲ್ಲ. ಧರ್ಮದ ಬಗ್ಗೆ ತಿಳುವಳಿಕೆ ಇಲ್ಲದವರಲ್ಲಿ ಅವರು ಒಬ್ಬರು ಎಂದು ಹೇಳಿದ್ದಾರೆ.

Comments (0)
Add Comment