ಬಾಕ್ಸಿಂಗ್​ಗೆ ನಿವೃತ್ತಿ ಘೋಷಿಸಿದ ವಿಶ್ವ ಚಾಂಪಿಯನ್ ಮೇರಿ ಕೋಮ್

ಅಸ್ಸಾಂ: ಆರು ಬಾರಿಯ ವಿಶ್ವ ಚಾಂಪಿಯನ್ ಮತ್ತು 2012ರ ಒಲಿಂಪಿಕ್ ಪದಕ ವಿಜೇತೆ ಹಾಗೂ ಸ್ಟಾರ್ ಇಂಡಿಯಾ ಬಾಕ್ಸರ್ ಮಾಂಗ್ಟೆ ಚುಂಗ್ನೈಜಾಂಗ್ ಮೇರಿ ಕೋಮ್ ಬುಧವಾರ ಬಾಕ್ಸಿಂಗ್​ಗೆ ನಿವೃತ್ತಿ ಘೋಷಿಸಿದ್ದಾರೆ.

ತಮ್ಮ ಕೈಗವಸು ಕಳಚಿ ಗೋಡೆಗೆ ನೇತು ಹಾಕಿದ್ದಾರೆ. ಅಂತರರಾಷ್ಟ್ರೀಯ ಬಾಕ್ಸಿಂಗ್ ಅಸೋಸಿಯೇಷನ್​​(IBA) ನಿಯಮಗಳ ಪ್ರಕಾರ ಪುರುಷ ಮತ್ತು ಮಹಿಳಾ ಬಾಕ್ಸರ್​ಗಳು 40 ವರ್ಷ ವಯಸ್ಸಿನವರೆಗೆ ಮಾತ್ರ ಸ್ಪರ್ಧಿಸಲು ಅವಕಾಶ ನೀಡಲಾಗುತ್ತದೆ.

ತಮಗೆ ಆಡುವ ಹಂಬಲ ಇದ್ದರೂ 41 ವರ್ಷದ ಮೇರಿ ಕೋಮ್​, ನಿಯಮಗಳ ಪ್ರಕಾರ ವಯಸ್ಸಿನ ಮಿತಿಯಿಂದ ತನ್ನ ವೃತ್ತಿಜೀವನಕ್ಕೆ ತೆರೆ ಎಳೆದಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ‘ನನಗೆ ಇನ್ನೂ ಹಸಿವು ಇದೆ. ಆದರೆ ದುರದೃಷ್ಟವಶಾತ್ ವಯಸ್ಸಿನ ಮಿತಿ ಮುಗಿದಿರುವುದರಿಂದ ನಾನು ಯಾವುದೇ ಸ್ಪರ್ಧೆಯಲ್ಲಿ ಸ್ಪರ್ಧಿಸಲು ಸಾಧ್ಯವಿಲ್ಲ. ನನಗಿನ್ನೂ ಆಡುವ ಸಾಮರ್ಥ್ಯ ಇದೆ. ಆದರೆ ವಯಸ್ಸಿನ ಮಿತಿಯಿಂದಾಗಿ ಬಾಕ್ಸಿಂಗ್​​ನಿಂದ ಹಿಂದೆ ಸರಿಯುತ್ತಿದ್ದೇನೆ. ನನ್ನ ಜೀವನದಲ್ಲಿ ಎಲ್ಲವನ್ನೂ ಸಾಧಿಸಿದೆ ಇದೀಗ ನಿವೃತ್ತಿ ಹೊಂದುವ ಸಮಯ’ ಎಂದು ತಿಳಿಸಿದ್ದಾರೆ.

6 ವಿಶ್ವ ಪ್ರಶಸ್ತಿ ಗೆದ್ದ ಮೊದಲ ಮಹಿಳಾ ಬಾಕ್ಸರ್: ಬಾಕ್ಸಿಂಗ್ ಇತಿಹಾಸದಲ್ಲಿ ಆರು ವಿಶ್ವ ಪ್ರಶಸ್ತಿಗಳನ್ನು ಗೆದ್ದ ಮೊದಲ ಮಹಿಳಾ ಬಾಕ್ಸರ್ ಮೇರಿ ಕೋಮ್‌. ಐದು ಬಾರಿ ಏಷ್ಯನ್ ಚಾಂಪಿಯನ್ ಆಗಿರುವ ಅವರು 2014ರ ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕವನ್ನು ಪಡೆದ ಭಾರತದ ಮೊದಲ ಮಹಿಳಾ ಬಾಕ್ಸರ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.

ಅನುಭವಿ ಆಟಗಾರ್ತಿ ಲಂಡನ್ 2012ರ ಒಲಂಪಿಕ್ ಕ್ರೀಡಾಕೂಟದಲ್ಲಿ ಕಂಚಿನ ಪದಕವನ್ನೂ ಗೆದಿದ್ದಾರೆ. 18ನೇ ವಯಸ್ಸಿನಲ್ಲಿ ಪೆನ್ಸಿಲ್ವೇನಿಯಾದ ಸ್ಕ್ರಂಟನ್‌ನಲ್ಲಿ ನಡೆದ ವಿಶ್ವ ಕೂಟದಲ್ಲಿ ಅದ್ಭುತ ಪ್ರದರ್ಶನ ನೀಡಿ ತನ್ನನ್ನು ತಾನು ಜಗತ್ತಿಗೆ ಪರಿಚಯಿಸಿಕೊಂಡಿದ್ದರು.

ಎಐಬಿಎ (AIBA) ಮಹಿಳಾ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಗೆದ್ದ ಮೊದಲ ಭಾರತೀಯ ಆಟಗಾರ್ತಿ ಎನಿಸಿದ್ದಾರೆ. 2005, 2006, 2008 ಮತ್ತು 2010ರ ಸೀಸನ್​ಗಳಲ್ಲಿ ವಿಶ್ವ ಚಾಂಪಿಯನ್‌ಶಿಪ್ ಪ್ರಶಸ್ತಿ ಗೆದ್ದಿದ್ದಾರೆ. 2008ರಲ್ಲಿ ಪ್ರಶಸ್ತಿ ಗೆದ್ದ ನಂತರ ಮೇರಿ ಅವಳಿ ಮಕ್ಕಳಿಗೆ ಜನ್ಮ ನೀಡಿದರು. ಇದರಿಂದ ಕೆಲ ಕಾಲ ಬಾಕ್ಸಿಂಗ್​ನಿಂದ ವಿರಾಮ ತೆಗೆದುಕೊಂಡಿದ್ದರು.

2012ರ ಒಲಿಂಪಿಕ್ ಪದಕವನ್ನು ಗೆದ್ದ ನಂತರ, ಮೇರಿ ತನ್ನ ಮೂರನೇ ಮಗುವಿಗೆ ಜನ್ಮ ನೀಡಿದರು. ಬಳಿಕ ಮತ್ತೊಮ್ಮೆ ವಿಶ್ರಾಂತಿ ಪಡೆದುಕೊಂಡಿದ್ದರು.

ನಂತರ ಬಾಕ್ಸಿಂಗ್​ಗೆ ಮರಳಿದ ಮೇರಿ 2018ರ ವಿಶ್ವ ಚಾಂಪಿಯನ್​ಶಿಪ್​​ನಲ್ಲಿ ಸ್ಥಾನ ಪಡೆದು ಉಕ್ರೇನ್​ನ ಹನ್ನಾ ಒಖೋಟಾ ವಿರುದ್ಧ 5-0 ಅಂತರದ ಗೆಲುವು ಸಾಧಿಸಿ 6ನೇ ಬಾರಿಗೆ ವಿಶ್ವ ಚಾಂಪಿಯನ್​ ಆದರು. ಇದಾದ ಒಂದು ವರ್ಷದ ನಂತರ ತಮ್ಮ 8ನೇ ವಿಶ್ವ ಪದಕಕ್ಕೆ ಮುತ್ತಿಕ್ಕಿದರು. ಕ್ರೀಡಾ ಪ್ರೇಮದಿಂದ ಅನೇಕರಿಗೆ ಮಾದರಿಯಾಗಿರುವ ಮೇರಿ ಕೋಮ್‌ ಅವರ ಸಾಧನೆ ಸಾರುವ ಸಿನಿಮಾ ಕೂಡ ಜನಪ್ರಿಯವಾಗಿದೆ. ಮೇರಿ ಪಾತ್ರದಲ್ಲಿ ನಟಿ ಪ್ರಿಯಾಂಕಾ ಚೋಪ್ರಾ ನಟಿಸಿದ್ದರು.

ಪ್ರಶಸ್ತಿಗಳು: ಮೇಕಿ ಕೋಮ್ ಅವರ ಸಾಧನೆಯನ್ನು ಅರಸಿ ಅನೇಕ ಪ್ರಶಸ್ತಿಗಳು ಬಂದಿವೆ. 2020ರಲ್ಲಿ ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಲ್ಲಿ ಒಂದಾದ ಪದ್ಮವಿಭೂಷಣ, 2013ರಲ್ಲಿ ಪದ್ಮಭೂಷಣ, 2009ರಲ್ಲಿ ಮೇಜರ್ ಧ್ಯಾನ ಚಂದ್ ಖೇಲ್ ರತ್ನ ಅವಾರ್ಡ್, 2006ರಲ್ಲಿ ಪದ್ಮಶ್ರೀ ಮತ್ತು 2003ರಲ್ಲಿ ಅರ್ಜನ್ ಅವಾರ್ಡ್ ಅವರಿಗೆ ಸಂದಿವೆ.
Comments (0)
Add Comment