ಮಗಳ ಮದುವೆಗೆ ಸಾಲ ಮಾಡಿದ ಹಣಕ್ಕೆ ಏಳು ವರ್ಷ ಜೀತದಾಳಾದ ಕತೆ ಇಲ್ಲಿದೆ.!

 

ಬೀದರ್: ಮಗಳ ಮದುವೆಗಾಗಿ ₹1 ಲಕ್ಷ ಸಾಲ ಪಡೆದದ್ದಕ್ಕೆ ಏಳು ವರ್ಷ ಜೀತದಾಳಾಗಿ ನನ್ನನ್ನು ದುಡಿಸಿಕೊಂಡಿದ್ದಾರೆ’ ಎಂದು ತಾಲ್ಲೂಕಿನ ಅಲಿಯಂಬರ್ ವ್ಯಕ್ತಿಯೊಬ್ಬರು ಅದೇ ಗ್ರಾಮದ ಇನ್ನೊಬ್ಬ ವ್ಯಕ್ತಿ ವಿರುದ್ಧ ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದಾರೆ.

ಗ್ರಾಮದ 60 ವರ್ಷ ವಯಸ್ಸಿನ ಶಂಕರ್ ಹಲಕುಡೆ ಅವರು ವಿಶ್ವನಾಥ ಗಂಗಶೆಟ್ಟಿ ಪಾಟೀಲ ವಿರುದ್ಧ ನೀಡಿರುವ ದೂರಿನ ಮೇರೆಗೆ ತಾಲ್ಲೂಕಿನ ಜನವಾಡ ಪೊಲೀಸ್ ಠಾಣೆಯಲ್ಲಿ ಸೆಪ್ಟೆಂಬರ್ 10ರಂದು ಪ್ರಕರಣ ದಾಖಲಾಗಿದೆ.

2016ರ ಜೂನ್ 1ರಿಂದ ಸತತ ಏಳು ವರ್ಷ ನನ್ನನ್ನು ವಿಶ್ವನಾಥ ಅವರು ಅವರ ಹೊಲದಲ್ಲಿ  ನಸುಕಿನ ಜಾವ ನಾಲ್ಕು ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಜೀತದಾಳಾಗಿ ಕೆಲಸ ಮಾಡಿಸಿಕೊಂಡಿದ್ದಾರೆ. ವಿಶ್ವನಾಥ ಅವರ ಮಗ ಬಸವರಾಜ ಪಾಟೀಲ ಅವರು ಮಾನಸಿಕವಾಗಿ ಕಿರುಕುಳ ಕೊಟ್ಟಿದ್ದಾರೆ. ಅವಾಚ್ಯ ಶಬ್ದಗಳಿಂದ ನನಗೆ ಹಾಗೂ ನನ್ನ ಕುಟುಂಬದ ಸದಸ್ಯರನ್ನು ನಿಂದಿಸಿ ಸ್ವಂತ ಮನೆ ಮಾರಾಟ ಮಾಡಲು ಒತ್ತಡ ಹೇರಿದ್ದಾರೆ ಎಂದು ಶಂಕರ್ ದೂರಿನಲ್ಲಿ ವಿವರಿಸಿದ್ದಾರೆ.

ಶಂಕರ್ ಹಲಕುಡೆ ಅವರು 2016ರಲ್ಲಿ ವಿಶ್ವನಾಥ ಗಂಗಶೆಟ್ಟಿ ಪಾಟೀಲ ಅವರಿಂದ ಮಗಳ ಮದುವೆಗಾಗಿ ₹1 ಲಕ್ಷ ಸಾಲ ಪಡೆದುಕೊಂಡಿದ್ದರು. ಮೂರು ವರ್ಷಗಳ ನಂತರ ಶಂಕರ್ ಅವರು ಸಾಲ ತೀರಿಸಿದ್ದಾರೆ. ಆದರೆ, ಇದನ್ನು ಒಪ್ಪದ ವಿಶ್ವನಾಥ, ಬಡ್ಡಿ ಸೇರಿ ಒಟ್ಟು ₹7.50 ಲಕ್ಷ ಸಾಲ ಹಿಂತಿರುಗಿಸಬೇಕಿತ್ತು ಎಂಬ ಕಾರಣ ನೀಡಿ ವರ್ಷಕ್ಕೆ ₹65 ಸಾವಿರ ಲೆಕ್ಕದಲ್ಲಿ ಜೀತದಾಳಾಗಿ ಕೆಲಸ ಮಾಡಿಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸುದ್ದಾರೆ.

 

ಮಗಳ ಮದುವೆಗೆ ಸಾಲ ಮಾಡಿದ ಹಣಕ್ಕೆ ಏಳು ವರ್ಷ ಜೀತದಾಳಾದ ಕತೆ ಇಲ್ಲಿದೆ.!
Comments (0)
Add Comment