‘ಮಹಿಳಾ ಮೀಸಲಾತಿಯಲ್ಲಿ ಹಿಂದುಳಿದ ಜಾತಿಗಳಿಗೆ ಒಳಮೀಸಲಾತಿಯ ಅಗತ್ಯ ಇದೆ’- ಸಿಎಂ

ಬೆಂಗಳೂರು: ಕೇಂದ್ರ ಸರ್ಕಾರ ಲೋಕಸಭೆಯಲ್ಲಿ ಮಂಡಿಸಿರುವ ಮಹಿಳಾ ಮೀಸಲಾತಿ ಮಸೂದೆ ಸ್ವಾಗತಾರ್ಹ ನಿರ್ಧಾರವಾಗಿದ್ದರೂ, ಹಿಂದುಳಿದ ಜಾತಿಯ ಮಹಿಳೆಯರಿಗೆ ಒಳಮೀಸಲಾತಿ ನೀಡದೆ ಇದ್ದರೆ ಈ ಸಮುದಾಯದ ಮಹಿಳೆಯರಿಗೆ ಅನ್ಯಾಯ ಮಾಡಿದಂತಾಗುವುದು, ಮಾತ್ರವಲ್ಲದೇ ಮೀಸಲಾತಿಯ ಉದ್ದೇಶವೇ ವಿಫಲವಾಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಪ್ರತಿಕಾ ಪ್ರಕಟನೆಯಲ್ಲಿ ತಿಳಿಸಿದ ಅವರು,ಲಿಂಗ ಅಸಮಾನತೆಯ ಜೊತೆಯಲ್ಲಿ ಜಾತಿ ಅಸಮಾನತೆಯನ್ನೂ ಒಳಗೊಂಡಿರುವ ಭಾರತೀಯ ಸಮಾಜದಲ್ಲಿ ಹಿಂದುಳಿದ ಜಾತಿಗಳಿಗೆ ಸೇರಿದ ಮಹಿಳೆಯರು ರಾಜಕೀಯವಾಗಿ ಉಳಿದವರ ಜೊತೆ ಪೈಪೋಟಿ ನಡೆಸಿ ಪ್ರಾತಿನಿಧ್ಯ ಪಡೆಯುವಂತಹ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಾಮರ್ಥ್ಯ ಇಲ್ಲದಿರುವುದನ್ನು ನಾವು ಗಮನಿಸಬೇಕಾಗಿದೆ ಎಂದರು.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಈಗಾಗಲೇ ರಾಜಕೀಯ ಮೀಸಲಾತಿ ಇರುವುದರಿಂದ ಆ ಸಮುದಾಯಗಳ ಮಹಿಳೆಯರಿಗೆ ಮೀಸಲಾತಿ ನೀಡುವುದು ಸಮಸ್ಯೆಯಾಗಲಾರದು

ಕೇಂದ್ರ ಸರ್ಕಾರ ಲೋಕಸಭೆಯಲ್ಲಿ ಮಂಡಿಸಿರುವ ಮಹಿಳಾಮೀಸಲಾತಿಯ ಮಸೂದೆಯನ್ನು ವಿವರವಾಗಿ ಪರಿಶೀಲಿಸಿದರೆ ಮಹಿಳೆಯರಿಗೆ ರಾಜಕೀಯ ನ್ಯಾಯಕೊಡಿಸುವುದಕ್ಕಿಂತಲೂ ಹೆಚ್ಚಾಗಿ ರಾಜಕೀಯ ಲಾಭ ಪಡೆಯುವ ಸ್ವಾರ್ಥವೇ ಕಾಣುತ್ತಿದೆ ಎಂದು ದೂಷಿಸಿದರು.

ಈಗಿನ ಮಸೂದೆಯನ್ನು ಇದೇ ರೂಪದಲ್ಲಿ ಜಾರಿಗೆ ತರಲು ಹೊರಟರೆ ಮಹಿಳೆಯರು ರಾಜಕೀಯ ಮೀಸಲಾತಿ ಪಡೆಯಲು ಇನ್ನೆರಡು ದಶಕಗಳ ಕಾಲ ಕಾಯಬೇಕಾಗಬಹುದು.

ಮಹಿಳೆಯರಿಗೆ ರಾಜಕೀಯ ಮೀಸಲಾತಿ ನೀಡಬೇಕೆಂಬ ಪ್ರಾಮಾಣಿಕ ಉದ್ದೇಶವನ್ನು ಪ್ರಧಾನಿ ನರೇಂದ್ರ ಮೋದಿಯವರು ಹೊಂದಿದ್ದರೆ 2010ರಲ್ಲಿನ ಕಾಂಗ್ರೆಸ್ ಸರ್ಕಾರದ ಕಾಲದಲ್ಲಿ ರಾಜ್ಯ ಸಭೆಯಲ್ಲಿ ಅಂಗೀಕಾರ ಪಡೆದಿರುವ ಮಸೂದೆಯನ್ನೇ ಲೋಕಸಭೆಯಲ್ಲಿ ಮಂಡಿಸಬೇಕಾಗಿತ್ತು ಎಂದು ಹೇಳಿದರು.

Comments (0)
Add Comment