ಯಾವುದೇ ಮೈತ್ರಿಕೂಟ ಮಾಡಿಕೊಂಡರೂ ಮತ್ತೊಮ್ಮೆ ಮೋದಿ ಸರ್ಕಾರಕ್ಕೆ ಗೆಲುವು : ಶಾ ವಿಶ್ವಾಸ

ನವದೆಹಲಿ : ಭ್ರಷ್ಟಾಚಾರ ಮಾಡುವ ‘ಇಂಡಿಯಾ’ ಮೈತ್ರಿಕೂಟದ ವಿಪಕ್ಷಗಳಿಗೆ ಕೇಜ್ರಿವಾಲ್ ಸರ್ಕಾರ ಬೆಂಬಲ ನೀಡುತ್ತಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಲೋಕಸಭೆಯಲ್ಲಿ ಮಾತನಾಡಿ, ಅರವಿಂದ ಕೇರ್ಜಿವಾಲ್ ನೇತೃತ್ವದ ದೆಹಲಿ ಸರ್ಕಾರ ಜನರ ಸೇವೆ ಮಾಡುವ ಬದಲು ಸಮಸ್ಯೆಗಳನ್ನು ಸೃಷ್ಟಿಸುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ. ಪ್ರತಿಪಕ್ಷಗಳ ವಿರೋಧದ ನಡುವೆಯೂ ದೆಹಲಿ ಸೇವೆಗಳ ಮೇಲೆ ಕೇಂದ್ರ ಸರ್ಕಾರ ನಿಯಂತ್ರಣ ಒದಗಿಸುವ 2023ರ ದೆಹಲಿ ರಾಷ್ಟ್ರೀಯ ರಾಜಧಾನಿ ಪ್ರದೇಶ(ತಿದ್ದುಪಡಿ) ವಿಧೇಯಕವನ್ನು ಲೋಕಸಭೆಯಲ್ಲಿ ಗುರುವಾರ ಅಂಗೀಕರಿಸಲಾಯಿತು. ರಾಷ್ಟ್ರರಾಜಧಾನಿ ಕುರಿತು ಯಾವುದೇ ಕಾನೂನು ಮಾಡುವ ಹಕ್ಕು ಸಂಸತ್ತಿಗೆ ಇದೆ ಎಂದು ಸುಪ್ರೀಂ ಕೋರ್ಟ್ ಆದೇಶದಲ್ಲಿ ಉಲ್ಲೇಖಿಸಲಾಗಿದೆ. ದೆಹಲಿಗೆ ಪ್ರತ್ಯೇಕ ಕಾನೂನು ಮಾಡುವ ಅಧಿಕಾರವನ್ನು ಸಂವಿಧಾನವೇ ನೀಡಿದೆ ಎಂದು ಹೊಸ ಮಸೂದೆಯನ್ನು ಉಲ್ಲೇಖಿಸಿ ಶಾ ಹೇಳಿದರು. ಲೋಕಸಭೆಯಲ್ಲಿ ವಿರೋಧ ಪಕ್ಷಗಳು ಯಾವುದೇ ಮೈತ್ರಿಕೂಟ ಮಾಡಿಕೊಂಡರೂ ಅವರ ವಿರುದ್ಧ ಮತ್ತೊಮ್ಮೆ ಮೋದಿ ಸರ್ಕಾರವೇ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ವಿಧೇಯಕ ಅಂಗೀಕಾರವಾಗುವುದಕ್ಕೂ ಮುನ್ನ ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ್ದ ಕೇಜ್ರಿವಾಲ್, ಈ ವಿಧೇಯಕವು ರಾಜ್ಯದ ಜನರನ್ನ ಗುಲಾಮರನ್ನಾಗಿ ಮಾಡುತ್ತದೆ ಎಂದು ಕಿಡಿಕಾರಿದ್ದರು.

Comments (0)
Add Comment