ರಾಜ್ಯದ 195 ತಾಲೂಕುಗಳು ಬರಪೀಡಿತ ಎಂದು ಘೋಷಣೆ

ಬೆಂಗಳೂರು: ಪ್ರಸಕ್ತ ಸಾಲಿನಲ್ಲಿ ಮುಂಗಾರು ವಿಫಲಗೊಂಡ ಹಿನ್ನೆಲೆಯಲ್ಲಿ 195 ತಾಲ್ಲೂಕುಗಳನ್ನು ಬರಪೀಡಿತ ತಾಲ್ಲೂಕುಗಳೆಂದು ಕರ್ನಾಟಕದ ಕಾಂಗ್ರೆಸ್​ ಸರ್ಕಾರ ಹೇಳಿದೆ. 195 ತಾಲೂಕುಗಳ ಪೈಕಿ 161 ತಾಲೂಕುಗಳನ್ನು ತೀವ್ರ ಬರಪೀಡಿತ ಹಾಗೂ 34 ತಾಲೂಕುಗಳನ್ನು ಸಾಧಾರಣ ಬರಪೀಡಿತ ಎಂದು ಘೋಷಣೆ ಮಾಡಲಾಗಿದೆ. ಬರಪೀಡಿತ ಪ್ರದೇಶಗಳ ಘೋಷಣೆ ಸಂಬಂಧ ಬೆಂಗಳೂರಿನ ವಿಧಾನಸೌಧದಲ್ಲಿ ನಡೆದ ಸಚಿವ ಸಂಪುಟ ಉಪ ಸಮಿತಿ ಸಭೆಯ ನಂತರ ಕಂದಾಯ ಸಚಿವ ಕೃಷ್ಣಭೈರೇಗೌಡ ಅವರು ಬರಪಿಡಿತ ತಾಲ್ಲೂಕುಗಳ ಪರಿಸ್ಥಿತಿ, ನೀರಿನ ಅಭಾವ ಕುರಿತು ಮಾಹಿತಿ ನೀಡಿದರು. 195 ತಾಲ್ಲೂಕುಗಳಲ್ಲಿ ಬರದ ಪರಿಸ್ಥಿತಿ ಇರುವುದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಶಿಫಾರಸ್ಸು ಮಾಡಲಾಗುತ್ತದೆ. ಇಂದು ಸಂಜೆಯೊಳಗೆ ಅಧಿಕೃತವಾಗಿ ಬರಪೀಡಿತ ತಾಲ್ಲೂಕುಗಳ ಘೋಷಣೆಗೆ ಮುಖ್ಯಮಂತ್ರಿಗಳು ಸಹಿ ಹಾಕಲಿದ್ದಾರೆ. ನಂತರ ಅಧಿಸೂಚನೆ ಪ್ರಕಟವಾಗಲಿದ್ದು 10 ದಿನಗಳೊಳಗಾಗಿ ಕೇಂದ್ರ ಸರಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ತಿಳಿಸಿದರು. 161 ತಾಲ್ಲೂಕುಗಳಲ್ಲಿ ತೀವ್ರವಾದ ಬರದ ಪರಿಸ್ಥಿತಿ ಇದೆ. 34 ತಾಲ್ಲೂಕುಗಳಲ್ಲಿ ಸಾಧಾರಣ ಬರದ ಪರಿಸ್ಥಿತಿ ನಿರ್ಮಾಣವಾಗಿದೆ. ಬರಪೀಡಿತ ತಾಲ್ಲೂಕುಗಳಲ್ಲಿ ಟಾಸ್ಕ್ ಫೋರ್ಸ್ ರಚಿಸಲು ಸೂಚನೆ ನೀಡಲಾಗಿದ್ದು, ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಹೆಚ್ಚಿನ ಉದ್ಯೋಗ ನೀಡಲು ಸೂಚಿಸಲಾಗಿದೆ. ನರೇಗಾ ಅಡಿಯಲ್ಲಿ ನೀಡಲಾಗುವ ಉದ್ಯೋಗದ ದಿನಗಳನ್ನು 100 ರಿಂದ 150 ಕ್ಕೆ ಹೆಚ್ಚಿಸಲು ನಿರ್ಧರಿಸಲಾಗಿದೆ ಎಂದು ಕಂದಾಯ ಸಚಿವ ಕೃಷ್ಣಭೈರೇಗೌಡ ತಿಳಿಸಿದ್ದಾರೆ.

Comments (0)
Add Comment