ವಿವಿಧ ಬೇಡಿಕೆ ಈಡೇರಿಕೆಗಾಗಿ ಆಗ್ರಹಿಸಿ ನಾಳೆ ಬೆಂಗಳೂರು ಬಂದ್‌ಗೆ ಖಾಸಗಿ ವಾಹನಗಳ ಚಾಲಕರು ಹಾಗೂ ಮಾಲೀಕರ ಕರೆ

ಬೆಂಗಳೂರು : ವಿವಿಧ ಬೇಡಿಕೆ ಈಡೇರಿಕೆಗಾಗಿ ಆಗ್ರಹಿಸಿ ನಾಳೆ ಸೆಪ್ಟೆಂಬರ್ 11ರಂದು ಬೆಂಗಳೂರು ಬಂದ್‌ಗೆ ಖಾಸಗಿ ವಾಹನಗಳ ಚಾಲಕರು ಹಾಗೂ ಮಾಲೀಕರು ಕರೆ ನೀಡಿದ್ದಾರೆ. ಇಂದು ಮಧ್ಯರಾತ್ರಿಯಿಂದ ಸೋಮವಾರ ಮಧ್ಯರಾತ್ರಿಯವರೆಗೂ ಖಾಸಗಿ ಸಾರಿಗೆ ಒಕ್ಕೂಟ ಕರೆ ನೀಡಿರುವ ಬಂದ್‍ನಿಂದಾಗಿ ಸಾರ್ವಜನಿಕರಿಗೆ ಆಗುವ ತೊಂದರೆಯಾಗಬಾರದೆಂದು ಸರ್ಕಾರ ಈಗಾಗಲೇ ತುರ್ತು ಕ್ರಮಗಳನ್ನು ಕೈಗೊಂಡಿದೆ. ಕರೆ ನೀಡಿರುವ ಖಾಸಗಿ ವಾಹನ ಬಂದ್‍ನಿಂದಾಗಿ ಕೆಲವು ಶಾಲೆಗಳಿಗೆ ರಜೆ ನೀಡಿದ್ದು, ಇನ್ನೂ ಕೆಲವು ಶಾಲೆಗಳು ಮಕ್ಕಳನ್ನು ಕರೆ ತರುವುದು ಪೋಷಕರ ಜವಾಬ್ದಾರಿ ಎಂದು ಹೇಳಿದೆ. ಮಕ್ಕಳಿಗೆ ತೊಂದರೆಯಾಗುವುದು ಬೇಡ ಮತ್ತು ಬಂದ್ ಸಂದರ್ಭದಲ್ಲಿ ಏನಾದರೂ ಗಲಾಟೆಯಾದರೆ ಮಕ್ಕಳ ರಕ್ಷಣೆ ಹೊರುವುದು ಸಾಧ್ಯವಾಗುವುದಿಲ್ಲ ಎಂದು ಕೆಲ ಖಾಸಗಿ ಶಾಲೆಗಳು ನಾಳೆ ರಜೆ ಘೋಷಿಸಿದೆ. ಆದರೆ ಮತ್ತೊಂದೆಡೆ ಖಾಸಗಿ ಶಾಲೆಗಳ ಒಕ್ಕೂಟ ಕ್ಯಾಂಪ್ಸ್ ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ನಾಳೆ ಎಂದಿನಂತೆ ನಮ್ಮ ಶಾಲೆಗಳು ನಡೆಯಲಿವೆ. ಆದರೆ ಮಕ್ಕಳನ್ನು ಶಾಲೆಗೆ ತಂದು ಬಿಡುವುದು ಪೋಷಕರ ಜವಾಬ್ದಾರಿ ಎಂದು ಹೇಳಿದ್ದಾರೆ. ಆದರೆ, ಸಂಘಟನೆಯ ಜೊತೆಯಲ್ಲಿರುವ ಕೆಲ ಶಾಲೆಗಳ ಆಡಳಿತ ಮಂಡಳಿ ಇದಕ್ಕೆ ವಿರೋಧ ವ್ಯಕ್ತಪಡಿಸಿದೆ. ಮೂಲಗಳ ಪ್ರಕಾರ ನಾಳೆ ಸರಕು ಸಾಗಣೆ ವಾಹನಗಳ ಒಕ್ಕೂಟ ಬಂದ್ ನಡೆಸಲಿದ್ದು, ಸುಮಾರು 16 ಸಾವಿರ ವಾಹನಗಳು ರಸ್ತೆಗೆ ಇಳಿಯಲ್ಲ ಎಂದಿವೆ.

Comments (0)
Add Comment