ಅಕ್ರಮ ಹಣ ವರ್ಗಾವಣೆ ಪ್ರಕರಣ: ರಾಜಸ್ಥಾನದಲ್ಲಿ 25 ಕಡೆ ಇಡಿ ದಾಳಿ

ರಾಜಸ್ಥಾನ: ಜಲ್ ಜೀವನ್ ಮಿಷನ್ ಹಗರಣಕ್ಕೆ ಸಂಬಂಧಿಸಿದಂತೆ ಹಣ ವರ್ಗಾವಣೆ ತನಿಖೆಯ ಭಾಗವಾಗಿ ಜಾರಿ ನಿರ್ದೇಶನಾಲಯ ಇಂದು ರಾಜಸ್ಥಾನದಲ್ಲಿ ಚುನಾವಣೆಗೆ ಒಳಪಟ್ಟಿರುವ ಹಿರಿಯ ಐಎಎಸ್ ಅಧಿಕಾರಿಯೊಬ್ಬರ ಮನೆ ಮೇಲೆ ಇಡಿ ದಾಳಿ ನಡೆಸಿದೆ.

ಪಬ್ಲಿಕ್ ಹೆಲ್ತ್ ಇಂಜಿನಿಯರಿಂಗ್ ಇಲಾಖೆಯ ಐಎಎಸ್ ಅಧಿಕಾರಿ ಸುಬೋಧ್ ಅಗರ್ವಾಲ್ ಅವರ ಕಚೇರಿ ಒಳಗೊಂಡಂತೆ ಜೈಪುರದ 25 ಸ್ಥಳಗಳಲ್ಲಿ ಇಡಿ ದಾಳಿ ನಡೆಸಿದೆ.

ಮನಿ ಲಾಂಡರಿಂಗ್ ತಡೆ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಇತರ ಕೆಲವು ಸಂಪರ್ಕಿತ ವ್ಯಕ್ತಿಗಳನ್ನು ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಶ್ರೀ ಶ್ಯಾಮ್ ಟ್ಯೂಬ್‌ವೆಲ್ ಕಂಪನಿಯ ಮಾಲೀಕ ಪದ್ಮಚಂದ್ ಜೈನ್, ಶ್ರೀ ಗಣಪತಿ ಟ್ಯೂಬ್‌ವೆಲ್ ಕಂಪನಿಯ ಮಾಲೀಕ ಮಹೇಶ್ ಮಿತ್ತಲ್ ಮತ್ತು ಇತರರು ಸಾರ್ವಜನಿಕ ಸೇವಕರಿಗೆ ಲಂಚ ನೀಡುವಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿ ರಾಜಸ್ಥಾನದ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಎಫ್‌ಐಆರ್‌ನಿಂದ ಹಣ ವರ್ಗಾವಣೆ ಪ್ರಕರಣದ ಕುರಿತು ತನಿಖೆ ನಡೆಸಲಾಗಿದೆ.

ಅಕ್ರಮ ರಕ್ಷಣೆ , ಟೆಂಡರ್‌, ಬಿಲ್‌ಗಳನ್ನು ಮಂಜೂರು ಮಾಡುವುದು ಮತ್ತು ಪಿಎಚ್‌ಇಡಿಯಿಂದ ಪಡೆದ ವಿವಿಧ ಟೆಂಡರ್‌ಗಳಿಗೆ ಸಂಬಂಧಿಸಿದಂತೆ ಅವರು ಅಕ್ರಮಗಳನ್ನು ಮುಚ್ಚಿಹಾಕಲು ಲಂಚ ನೀಡಿರುವುದಾಗಿ ತಿಳಿದುಬಂದಿದೆ.

ಕೇಂದ್ರ ಸರ್ಕಾರ ಪ್ರಾರಂಭಿಸಿರುವ ಜಲ ಜೀವನ್ ಮಿಷನ್ ಮನೆಯ ಟ್ಯಾಪ್ ಸಂಪರ್ಕಗಳ ಮೂಲಕ ಸುರಕ್ಷಿತ ಮತ್ತು ಸಮರ್ಪಕ ಕುಡಿಯುವ ನೀರನ್ನು ಒದಗಿಸುವ ಗುರಿಯನ್ನು ಹೊಂದಿದೆ. ಈ ಯೋಜನೆಯನ್ನು ರಾಜಸ್ಥಾನದಲ್ಲಿ ರಾಜ್ಯ ಪಿಎಚ್‌ಇಡಿ ಜಾರಿಗೊಳಿಸಿತ್ತು. ಪ್ರತಿಪಕ್ಷಗಳನ್ನು ಗುರಿಯಾಗಿಸಲು ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರದ ನಿರ್ದೇಶನದಂತೆ ಕೇಂದ್ರೀಯ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ ಎಂದು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಆರೋಪಿಸಿದ್ದಾರೆ.

Comments (0)
Add Comment