ಅಪ್ರಾಪ್ತ ಬಾಲಕನ ಬಳಿಯಿತ್ತು 12.46 ಲಕ್ಷ ಮೌಲ್ಯದ ಚಿನ್ನದ ಬಿಸ್ಕೆಟ್…!!

ಬೆಂಗಳೂರು : ಅಪ್ರಾಪ್ತ ಬಾಲಕನೋರ್ವ ತಾನು ಕೆಲಸ ಮಾಡುತ್ತಿದ್ದ ವ್ಯಕ್ತಿಯ ಬಳಿಯಿಂದ 12.46 ಲಕ್ಷ ರೂಪಾಯಿ ಮೌಲ್ಯದ ಎರಡು ಚಿನ್ನದ ಬಿಸ್ಕತ್‌ಗಳನ್ನು ಕದ್ದೊಯ್ದು ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಕೇಂದ್ರ ಕೈಗಾರಿಕಾ ಭದ್ರತಾ ಪಡೆ (CISF) ಸಿಬ್ಬಂದಿಗಳ ಕೈಗೆ ಸಿಕ್ಕಿ ಬಿದ್ದಿದ್ದಾನೆ.

ಚಿನ್ನದ ಬಿಸ್ಕೆಟ್ ಜೊತೆ ಬೆಂಗಳೂರು ಬಿಟ್ಟು ಹೊರಡಲು ಪ್ಲಾನ್ ಮಾಡುತ್ತಿದ್ದಾಗ ಏರ್ ಪೋರ್ಟ್ ಭದ್ರತಾ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾನೆ. ಬಾಲಕ ತನ್ನ ಪಾದರಕ್ಷೆಯಲ್ಲಿ ಬಿಸ್ಕೆಟ್‌ಗಳನ್ನು ಬಚ್ಚಿಟ್ಟಿದ್ದ. ಇದೀಗ ಬಾಲಕನನ್ನು ಪೊಲೀಸರು ಬಂಧಿಸಿದ್ದಾರೆ.

ಸಿಐಎಸ್‌ಎಫ್ ಸಬ್ ಇನ್ಸ್‌ಪೆಕ್ಟರ್ ದೀಪಕ್ ತನ್ವರ್ ನೀಡಿದ ದೂರಿನ ಮೇರೆಗೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಾಲಕನನ್ನು ವೀಕ್ಷಣಾಲಯಕ್ಕೆ ಕಳುಹಿಸಲಾಗಿದೆ.

ಬಾಲಕ ರಾಜಸ್ಥಾನ ಮೂಲದವನಾಗಿದ್ದು, ಜನವರಿ 25 ರಂದು ಇಂಡಿಗೋ ಫ್ಲೈಟ್ (6E 586) ಮೂಲಕ ಅಹಮದಾಬಾದ್‌ಗೆ ತೆರಳಲು ಪ್ಲಾನ್ ಮಾಡಿದ್ದನು. ಮುಂಜಾನೆ 1.15 ರ ಸುಮಾರಿಗೆ ಭದ್ರತಾ ತಪಾಸಣೆಯ ಸಮಯದಲ್ಲಿ, ಡೋರ್ ಫ್ರೇಮ್ ಮೆಟಲ್ ಡಿಟೆಕ್ಟರ್ ಅಲಾರಾಂ ಹೊಡೆಯಿತು ಎಂದು ತಿಳಿದು ಬಂದಿದೆ.

Comments (0)
Add Comment