ಅಯೋಧ್ಯೆಯಲ್ಲಿ ಭಾರತದ ಅತಿದೊಡ್ಡ ಮಸೀದಿ ನಿರ್ಮಾಣ – ಮೆಕ್ಕಾದ ಇಮಾಮ್‌ರಿಂದ ಶೀಘ್ರದಲ್ಲೇ ಅಡಿಗಲ್ಲು..!

ಲಕ್ನೋ: ಸುಪ್ರೀಂ ಕೋರ್ಟ್‌ನ ತೀರ್ಪಿನ ಅನ್ವಯ ಅಯೋಧ್ಯೆಯಲ್ಲಿ ನಿರ್ಮಾಣ ಆಗಬೇಕಿರುವ ಮೊಹಮ್ಮದ್ ಬಿನ್ ಅಬ್ದುಲ್ಲಾ ಮಸೀದಿಗೆ ಮುಸ್ಲಿಮರ ಪವಿತ್ರ ತೀರ್ಥ ಕ್ಷೇತ್ರ ಮೆಕ್ಕಾದ ಇಮಾಮ್ ಶಿಲಾನ್ಯಾಸ ನೆರವೇರಿಸಲಿದ್ದಾರೆ. ಅಯೋಧ್ಯೆಯಿಂದ 25 ಕಿ.ಮೀ ದೂರದಲ್ಲಿರುವ ಧನ್ನಿಪುರದಲ್ಲಿ ಪ್ರವಾದಿಯವರ ಹೆಸರಿನಲ್ಲಿ ಮೊಹಮ್ಮದ್ ಬಿನ್ ಅಬ್ದುಲ್ಲಾ ಮಸೀದಿಯನ್ನು ನಿರ್ಮಿಸಲಾಗುತ್ತಿದೆ.

ಅಯೋಧ್ಯೆ ರಾಮ ಮಂದಿರ ವಿವಾದದಲ್ಲಿ ಸುಪ್ರೀಂ ಕೋರ್ಟ್ ಆದೇಶಕ್ಕೆ ಅನುಗುಣವಾಗಿ ಉತ್ತರ ಪ್ರದೇಶ ಸರ್ಕಾರವು ಮುಸ್ಲಿಮರಿಗೆ ಅಲ್ಲಿ ಜಾಗ ನೀಡಿದೆ. ಇಂಡೋ-ಇಸ್ಲಾಮಿಕ್ ಕಲ್ಚರಲ್ ಫೌಂಡೇಶನ್ (ಐಐಸಿಎಫ್) ಈ ಮಸೀದಿ ನಿರ್ಮಾಣದ ಜವಾಬ್ದಾರಿಯನ್ನು ವಹಿಸಿಕೊಂಡಿದೆ. ಮೆಕ್ಕಾದಲ್ಲಿ ಇರುವ ಕಾಬಾದಲ್ಲಿ ಪ್ರತಿ ದಿನ ನೆರವೇರುವ ನಮಾಜ್‌ ನಡೆಸಿಕೊಡುವ ಇಮಾಮ್-ಇ-ಹರಮ್ ಅವರು ಅಯೋಧ್ಯೆಯ ಮಸೀದಿಗೆ ಅಡಿಗಲ್ಲು ಹಾಕಲಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.

ಈ ಸಂಬಂಧ ಮಾಹಿತಿ ನೀಡಿರುವ ಬಿಜೆಪಿ ನಾಯಕ ಮತ್ತು ಮಹಾರಾಷ್ಟ್ರದ ಮಾಜಿ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷ ಶೇಖ್, ಮಸೀದಿಯು ಸಾಂಪ್ರದಾಯಿಕ ತಾಜ್ ಮಹಲ್‌ಗಿಂತ ಹೆಚ್ಚು ಸುಂದರವಾಗಿರಲಿದೆ. ಮುಂದಿನ ವರ್ಷದ ಆರಂಭದಲ್ಲಿ ನಡೆಯುವ ಶಂಕುಸ್ಥಾಪನೆಗಾಗಿ ದೇಶಾದ್ಯಂತ ಸಾಧು- ಸಂತರು ಮತ್ತು ಮುಸ್ಲಿಂ ಹಾಗೂ ಕ್ರೈಸ್ತ ಧರ್ಮಗುರುಗಳನ್ನು ಆಹ್ವಾನಿಸಲಾಗುವುದು ಎಂದು ತಿಳಿಸಿದ್ದಾರೆ. ಮಸೀದಿಯ ಜೊತೆಗೆ, ದಂತವೈದ್ಯಶಾಸ್ತ್ರ, ಕಾನೂನು, ವಾಸ್ತುಶಿಲ್ಪ ಮತ್ತು ಅಂತರರಾಷ್ಟ್ರೀಯ ಸಂಬಂಧಗಳಂತಹ ವಿವಿಧ ವಿಷಯಗಳಿಗೆ ಮೀಸಲಾದ ಕಾಲೇಜುಗಳನ್ನು ಮಸೀದಿ ಅಭಿವೃದ್ಧಿ ಸಮಿತಿಯು ಅಲ್ಲಿ ಅಭಿವೃದ್ಧಿಪಡಿಸುತ್ತಿದೆ. ಹೆಚ್ಚುವರಿಯಾಗಿ, ಕ್ಯಾನ್ಸರ್ ಚಿಕಿತ್ಸೆ ಆಸ್ಪತ್ರೆ ಸೇರಿದಂತೆ ಎರಡು ಆಸ್ಪತ್ರೆಗಳು ಬರಲಿವೆ, ಎಲ್ಲಾ ಧರ್ಮದ ಜನರಿಗಾಗಿ ಸಸ್ಯಾಹಾರಿ ಸಮುದಾಯ ಕೇಂದ್ರವನ್ನು ಸಹ ನಿರ್ಮಿಸಲಾಗುವುದು ಎಂದು ಶೇಖ್ ಮಾಹಿತಿ ನೀಡಿದ್ದಾರೆ.

Comments (0)
Add Comment