ಅಯ್ಯೋ ದುರ್ಧೈವಿಯೇ; ದೇವರಿಗೆ ದೀಪ ಹಚ್ಚಲು ಹೋಗಿ ಪ್ರಾಣ ಕಳೆದುಕೊಂಡ 6 ವರ್ಷದ ಬಾಲಕಿ

ಶಾಲೆಯ ಸಮೀಪದ ದೇವಸ್ಥಾನವೊಂದರಲ್ಲಿ ದೀಪ ಹಚ್ಚಲು ಹೋದ ಸಂದರ್ಭ ಬಟ್ಟೆಗೆ ಬೆಂಕಿ ತಗುಲಿ ಗಾಯಗೊಂಡಿದ್ದ ವಿದ್ಯಾರ್ಥಿನಿ ಮೃತಪಟ್ಟ ಘಟನೆ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಮೇಳಕೋಟೆ ಸರ್ಕಾರಿ ಶಾಲೆಯಲ್ಲಿ ನಡೆದಿದೆ.

ಶಾಲೆಯ ಒಂದನೇ ತರಗತಿಯ ವಿದ್ಯಾರ್ಥಿನಿ ದೀಕ್ಷಾ ಮೃತಪಟ್ಟ ದುರ್ದೈವಿ ಬಾಲಕಿ.

ಶಾಲೆಯಲ್ಲಿ ಮಧ್ಯಾಹ್ನದ ಊಟದ ವಿರಾಮದ ವೇಳೆ ಆಕೆ ಶಾಲೆಯ ಪಕ್ಕದಲ್ಲೇ ಇರುವ ದೇವಾಲಯದಲ್ಲಿ ದೀಪ ಹಚ್ಚಲು ಹೋಗಿದ್ದಳು. ಹಿರಿಯರು ಮಾಡುವ ಸಂಪ್ರದಾಯಗಳನ್ನು ಗಮನಿಸಿದ್ದ ಆಕೆ ಭಕ್ತಿಯಿಂದ ಆಕೆ ಈ ಕೆಲಸವನ್ನು ಮಾಡಿದ್ದಳು. ತನ್ನ ಜತೆಗೆ ತರಗತಿಯ ಇತರ ಕೆಲವು ಮಕ್ಕಳನ್ನು ಕೂಡ ಆಕೆ ಕರೆದುಕೊಂಡು ಹೋಗಿದ್ದಳು. ಮಾರ್ಚ್‌ 13ರಂದು ಘಟನೆ ನಡೆದಿತ್ತು.

ಆ ಬಾಲಕಿಗೆ ದೀಪ ಹಚ್ಚಿದರೆ ಒಳ್ಳೆಯದಾಗುತ್ತದೆ ಎನ್ನುವುದು ಗೊತ್ತಿತ್ತೇ ವಿನಃ ಬೆಂಕಿಯಿಂದ ಆಗಬಹುದಾದ ಅನಾಹುತಗಳ ಅರಿವು ಇರಲಿಲ್ಲ. ಆದರೆ, ದುರದೃಷ್ಟವಶಾತ್‌ ಅಲ್ಲಿ ದುರಂತ ಸಂಭವಿಸಿಯೇ ಬಿಟ್ಟಿತು.

ಗೆಳತಿಯರೊಂದಿಗೆ ಖುಷಿ ಖುಷಿಯಾಗಿ ಹೋಗಿ ದೇವರಿಗೆ ದೀಪ ಹಚ್ಚಿದ ಆಕೆ ಈ ಸಂಭ್ರಮದಲ್ಲಿ ಮೈಮರೆತಿದ್ದಳೋ ಗೊತ್ತಿಲ್ಲ. ಅಂತೂ ಆಕೆಯ ಬಟ್ಟೆಗೆ ಬೆಂಕಿ ಹತ್ತಿಕೊಂಡಿತ್ತು. ಬೆಂಕಿ ಬಟ್ಟೆಗೆ ತಗುಲಿ ಮೈಗೆ ಸುಟ್ಟ ಗಾಯಗಳಾಗಿತ್ತು. ಆಕೆಯನ್ನು ಕೂಡಲೇ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಆಕೆಯನ್ನು ಬೆಂಗಳೂರಿನ ಆಸ್ಪತ್ರೆಗೂ ದಾಖಲಿಸಲಾಗಿತ್ತು. ಇದೀಗ ಆಕೆ ಚಿಕಿತ್ಸೆ ಫಲಿಸದೆ ಮಾರ್ಚ್‌ 19ರಂದು ಮೃತಪಟ್ಟಿದ್ದಾಳೆ.

Comments (0)
Add Comment